ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೆ ಕೆಲವು ದಿನಗಳಷ್ಟೇ ಬಾಕಿಯಿದ್ದು, ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಈ ಹೈವೋಲ್ಟೇಜ್ ಪಂದ್ಯ ಕ್ರಿಕೆಟ್ ಲೋಕದ ಗಮನ ಸೆಳೆದಿದೆ.
ಉಭಯ ತಂಡಗಳ ನಡುವಿನ ಫೈನಲ್ ಹಣಾಹಣಿ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳ ಜೊತೆಗೆ ಮಾಜಿ ಕ್ರಿಕೆಟಿಗರು ಸಹ ಕಾಯುತ್ತಿದ್ದಾರೆ.
ಇನ್ನೂ ಫೈನಲ್ ಪಂದ್ಯಕ್ಕೂ ಮುನ್ನವೇ ಎರಡು ತಂಡಗಳ ಪ್ರಮುಖ ಆಟಗಾರರ ಸಾಮರ್ಥ್ಯದ ಬಗ್ಗೆ ಚರ್ಚೆ ಶುರುವಾಗಿದ್ದು, ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಗೆಲ್ಲಬೇಕಾದಲ್ಲಿ ತಂಡದ ವೇಗಿ ಮೊಹಮ್ಮದ್ ಶಮಿ ತನ್ನ ಆಟವನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯಬೇಕಿದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಐಸಿಸಿ ರಿವ್ಯೂ ಕಾರ್ಯಕ್ರಮದಲ್ಲಿ ಮೊಹಮ್ಮದ್ ಶಮಿ ಪ್ರದರ್ಶನದ ಕುರಿತು ಮಾತನಾಡಿರುವ ಪಾಂಟಿಂಗ್, ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್ ಆಗಿರುವ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರ ಅನುಪಸ್ಥಿತಿಯಲ್ಲಿ ತಂಡದ ಬೌಲಿಂಗ್‌ನಲ್ಲಿ ಹೆಚ್ಚಿನ ಜವಾಬ್ದಾರಿ ಹೊತ್ತಿದ್ದಾರೆ. ಭಾರತ ತಂಡ ಫೈನಲ್‌ನಲ್ಲಿ ಗೆಲ್ಲಬೇಕಾದರೆ ಮೊಹಮ್ಮದ್ ಶಮಿ ತನ್ನ ಪ್ರದರ್ಶನವನ್ನ ಮತ್ತಷ್ಟು ಉತ್ತಮಗೊಳಿಸಬೇಕಿದೆ. ಶಮಿ ಎಷ್ಟು ಪರಿಣಾಮಕಾರಿ ಮತ್ತು ಶ್ರೇಷ್ಠ ಬೌಲರ್ ಎಂಬುದು ಆಸ್ಟ್ರೇಲಿಯಾ ಆಟಗಾರರಿಗೆ ತಿಳಿದಿದೆ. ಹೀಗಾಗಿ ಶಮಿ ತಮ್ಮ ಪ್ರದರ್ಶನವನ್ನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಬೇಕಿದೆ ಎಂದಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದ್ದರು. ಟೂರ್ನಿಯ ಆರಂಭದಿಂದ ಅಂತ್ಯದವರೆಗೂ ತನ್ನ ಪ್ರದರ್ಶನದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ವೇಗದ ಬೌಲರ್, ಟೂರ್ನಿಯಲ್ಲಿ 28 ವಿಕೆಟ್‌ಗಳನ್ನ ಪಡೆಯುವ ಮೂಲಕ ಗರಿಷ್ಠ ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು. ಆದರೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್‌ನಲ್ಲಿ ಎಲ್ಲವೂ ವಿಭಿನ್ನವಾಗಿದ್ದು, ಇಂಗ್ಲೆಂಡ್ ವಾತಾವರಣ ಸಹ ವಿಭಿನ್ನವಾಗಿರಲಿದೆ. ಹೀಗಾಗಿ ಆಟಗಾರರು ಅಲ್ಲಿನ ಪರಿಸ್ಥಿತಿಗೆ ಹೊಂದುಕೊಂಡು ಇಂಪ್ಯಾಕ್ಟ್ ಮಾಡಬೇಕಿದೆ.




