ಇಂಗ್ಲೆಂಡ್ ಅಂಗಳದಲ್ಲಿ ಜೂ.7ರಿಂದ ಆರಂಭವಾಗಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಫೈನಲ್ ಹಣಾಹಣಿಯಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಯಾರಾಗಬೇಕೆಂಬ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.
ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಸ್ಥಾನ ಪಡೆಯಲು ಕೆ.ಎಸ್.ಭರತ್ ಮತ್ತು ಇಶಾನ್ ಕಿಶನ್ ನಡುವೆ ಪೈಪೋಟಿ ನಡೆಯುತ್ತಿದ್ದು, ಇಬ್ಬರಲ್ಲಿ ಯಾರನ್ನ ಆಯ್ಕೆ ಮಾಡಬೇಕು ಎಂಬುದು ತಂಡದ ಮ್ಯಾನೇಜ್ಮೆಂಟ್‌ಗೆ ಚಿಂತೆಗೇಡು ಮಾಡಿದೆ. ಆಸ್ಟ್ರೇಲಿಯಾ ತಂಡಕ್ಕೆ ಟಕ್ಕರ್ ನೀಡುವ ನಿಟ್ಟಿನಲ್ಲಿ ಟೀಂ ಇಂಡಿಯಾ ಸೇರಿದಂತೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್‌ಗಳು ತಮ್ಮದೇ ಸಲಹೆಗಳನ್ನ ನೀಡಿದ್ದು, ಕೆಲವರು ಕೆ.ಎಸ್.ಭರತ್ ಪರವಾಗಿ ಬ್ಯಾಟ್ ಬೀಸಿದ್ದರೆ. ಇನ್ನೂ ಕೆಲವರು ಇಶಾನ್ ಕಿಶನ್ ಅವರನ್ನ ಆಡಿಸಬೇಕೆಂಬ ಸಲಹೆ ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಇದೇ ವರ್ಷದಲ್ಲಿ ತವರಿನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸಂದರ್ಭದಲ್ಲಿ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ಕೆ.ಎಸ್.ಭಾರತ್ ನಾಲ್ಕು ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ. ಆದರೆ ಭಾರತದ ಏಕದಿನ ಮತ್ತು ಟಿ20 ತಂಡದಲ್ಲಿ ಕಾಣಿಸಿಕೊಂಡಿರುವ ಇಶಾನ್ ಕಿಶನ್, ಟೆಸ್ಟ್ ತಂಡದಲ್ಲಿ ಈವರೆಗೂ ಸ್ಥಾನ ಪಡೆದಿಲ್ಲ. ಹೀಗಾಗಿ ಆಸೀಸ್ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ನಿರೀಕ್ಷೆಯೊಂದಿಗೆ ಕಿಶನ್ ಇಂಗ್ಲೆಂಡ್‌ಗೆ ತೆರಳಿದ್ದಾರೆ.
ಪ್ರಮುಖವಾಗಿ ಭಾರತದ ಮಾಜಿ ಕ್ರಿಕೆಟಿಗರಾದ ರವಿ ಶಾಸ್ತ್ರಿ, ಹರ್ಭಜನ್ ಸಿಂಗ್ ಅವರುಗಳು ಕೆ.ಎಸ್.ಭರತ್ ಪರ ಬ್ಯಾಟ್ ಮಾಡಿದ್ದು, ತವರಿನಲ್ಲಿ ಆಸೀಸ್ ವಿರುದ್ಧ ನಡೆದ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಕಾರಣದಿಂದ ಭರತ್‌ಗೆ ಅವಾಕಾಶ ಕೊಡಬೇಕೆಂದಿದ್ದಾರೆ.
ಮತ್ತೊಂದೆಡೆ ಮಾಜಿ ಆಟಗಾರರಾದ ಸಂಜಯ್ ಮಂಜ್ರೇಕರ್ ಹಾಗೂ ಮೊಹಮ್ಮದ್ ಕೈಫ್ ಅವರುಗಳು ಇಶಾನ್ ಕಿಶನ್ ಅವರನ್ನು ಕಣಕ್ಕಿಳಿಸಬೇಕೆಂದಿದ್ದಾರೆ. ಆದರೆ ತೀವ್ರ ಕುತೂಹಲ ಮೂಡಿಸಿರುವ ಭರತ್ ಹಾಗೂ ಕಿಶನ್ ನಡುವಿನ ಪೈಪೋಟಿಯಲ್ಲಿ ತಂಡದ ಮ್ಯಾನೇಜ್ಮೆಂಟ್ ಯಾರಿಗೆ ಮಣೆ ಹಾಕಲಿದೆ ಎಂಬುದನ್ನ ಕಾದು ನೋಡಬೇಕಿದೆ.




