ಮೈಸೂರು : ಪಿಎಸ್ಐ ಹಗರಣ ಮರು ತನಿಖೆ ನಡೆಸಲು ಕಾಂಗ್ರೆಸ್ ನೇತೃತ್ವದ ಸರ್ಕಾರ ಮುಂದಾಗಿರುವುದಕ್ಕೆ ಬಿಜೆಪಿ ಶಾಸಕ ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಪಿಎಸ್ಐ ಹಗರಣದಲ್ಲಿ ನನ್ನ ಹೆಸರನ್ನ ಕೆಲವು ಕಾಂಗ್ರೆಸ್ ಮುಖಂಡರು ತೇಲಿ ಬಿಟ್ಟಿದ್ದಾರೆ. ಅವರದ್ದೇ ಸರ್ಕಾರ ಇದೆ, ಯಾವುದೇ ವಿಚಾರವಾಗಿ ತನಿಖೆ ಮಾಡಲಿ ಆದರೆ, ಪಾರದರ್ಶಕವಾದ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷವನ್ನ ಬಗ್ಗುಬಡಿಯಬೇಕೆಂದು ಸೇಡಿನ ಮನೋಭಾವನೆಯಿಂದ ಮಾಡುವುದು ಸರಿಯಲ್ಲ, ಪಾರದರ್ಶಕವಾಗಿ ತನಿಖೆ ಮಾಡಿದರೆ ಸ್ವಾಗತ ಎಂದು ತಿಳಿಸಿದ್ದಾರೆ.
ಗೋ ಹತ್ಯೆ ನಿಷೇಧ ಕಾಯ್ದೆ
ಗೋ ಹತ್ಯೆ ನಿಷೇಧ ಕಾಯ್ದೆ ಕುರಿತು ಸಚಿವರು ನೀಡಿರುವ ಹೇಳಿಕೆಯನ್ನ ನೋಡಿದರೆ ದೇಶದ ಸಂಸ್ಕೃತಿಯ ಅರಿವು, ಕಾಳಜಿ ಅವರಿಗಿಲ್ಲ ಎಂದೆನಿಸುತ್ತದೆ ಎಂದು ತಿಳಿಸಿದರು. ಈ ರೀತಿಯ ಉಡಾಫೆ ಹೇಳಿಕೆಯನ್ನು ರಾಜ್ಯದ ಜನರು ನಿರೀಕ್ಷೆ ಮಾಡರಲಿಲ್ಲ ಎಂದು ತಿಳಿಸಿದರು.
ಅನೇಕ ಸಚಿವರು ಗೆದ್ದಿರುವ ವಿಶ್ವಾಸದಲ್ಲಿ ನಾನಾ ರೀತಿಯ ಹೇಳಿಕೆ ನೀಡುತ್ತಿದ್ದಾರೆ, ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗದ ರೀತಿ ನಡೆದುಕೊಳ್ಳಬೇಕು, ನಮ್ಮ ಹಿಂದು ಸಂಸ್ಕೃತಿ ಪರಂಪರೆ ಗೊತ್ತಿದ್ದರೆ ಈ ರೀತಿ ಹೇಳಿಕೆ ನೀಡುತ್ತಿರಲಿಲ್ಲ. ಈ ಕುರಿತು ನಾಳೆಯಿಂದ ಬಿಜೆಪಿ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ. ಜನ ಸಾಮಾನ್ಯರು ಕೂಡ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿ
ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ, ಚುನಾವಣಾ ಸಂದರ್ಭದಲ್ಲಿ ನೀಡಿರುವ ಆಶ್ವಾಸನೆಯನ್ನ ಈಡೇರಿಕೆಗಾಗಿ ಜನರು ನೀರಿಕ್ಷೆಯಿಟ್ಟುಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಷರತ್ತು ವಿಧಿಸುತ್ತಿದ್ದಾರೆ. ಗ್ಯಾರೆಂಟಿ ಯೋಜನೆಗಳಿಗೆ ಎಷ್ಟು ಹಣಬೇಕಾಗುತ್ತೆ, ಅದಕ್ಕೆ ಹಣವನ್ನ ಹೇಗೆ ಹೊಂದಿಸಿಕೊಳ್ಳುತ್ತಾರೆ, ಹೊಸ ತೆರಿಗೆ ಹಾಕುತ್ತಾರಾ? ಅಥವಾ ಸಾಲವನ್ನ ಮಾಡುತ್ತಾರಾ ಇದೆಲ್ಲದರ ಕುರಿತು ಕಾಂಗ್ರೆಸ್ ಉತ್ತರಿಸಬೇಕು ಎಂದು ತಿಳಿಸಿದರು.




