ಬೆಂಗಳೂರು : ರಾಜ್ಯದಲ್ಲಿ ಅಧಿಕಾರದ ಗದ್ದುಗೆಯನ್ನು ಕಳೆದುಕೊಂಡಿರುವ ಬಿಜೆಪಿಯವರು ಬಾಲ ಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತೀ ಶೀಘ್ರದಲ್ಲೇ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ತಲೆದೋರಬಹುದು ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಟ್ವೀಟ್ ನ ಸಂಪೂರ್ಣ ವಿವರ ಇಲ್ಲಿದೆ.

ಬೊಮ್ಮಾಯಿಯವರೇ,ಯಾವ ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದೀರಿ? ತನ್ನ ರಾಜಕೀಯ ವಿರೋಧಿಗಳನ್ನ ಮಟ್ಟ ಹಾಕಲು ತನಿಖಾ ಏಜೇನ್ಸಿಗಳನ್ನು, ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ವಾಕ್ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವ ನಿಮ್ಮ ಮೋದಿ ಸರ್ಕಾರದ ನಡೆ ನಿಮಗೆ ತುರ್ತುಪರಿಸ್ಥಿತಿ ಎಂದು ಅನ್ನಿಸುತ್ತಿಲ್ಲವೇ?

ಅಧಿಕಾರ ಕಳೆದುಕೊಂಡಿರುವ BJPಯವರು ಬಾಲ ಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಿದ್ದಾರೆ. ಬೊಮ್ಮಾಯಿಯವರೇ ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ತುರ್ತು ಪರಿಸ್ಥಿತಿಯ ಲಕ್ಷಣವಲ್ಲ. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಜವಬ್ಧಾರಿಯುತ ಸರ್ಕಾರದ ಕರ್ತವ್ಯ. ನಮ್ಮ ಸರ್ಕಾರ ಮಾಡುತ್ತಿರುವುದು ಅದನ್ನೆ.

ಬೊಮ್ಮಾಯಿಯವರೇ ಒಂದು ಜವಾಬ್ಧಾರಿಯುತ ಸರ್ಕಾರವಾಗಿ ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮ ಕರ್ತವ್ಯ. ಕಾನೂನು ಕೈಗೆತ್ತಿಕೊಳ್ಳುವವರ, ಸಂವಿಧಾನ ಬಾಹಿರ ಕೃತ್ಯ ನಡೆಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಿಮ್ಮ ಪ್ರಕಾರ ತುರ್ತುಪರಿಸ್ಥಿತಿಯಾದರೆ ನಿಮ್ಮ ವಿವೇಚನಾ ಶಕ್ತಿಯ ಬಗ್ಗೆ ಅನುಕಂಪವಿದೆ. ನೀವು ಕಾನೂನು ಉಲ್ಲಂಘಿಸುವವರ ಪರವೇ? ಎಂದು ಟ್ವೀಟ್ ಮಾಡಿದ್ದಾರೆ.




