JDS STATE YOUTH PRESIDENT: ಜೆಡಿಎಸ್ ಯುವಘಟಕ ಅಧ್ಯಕ್ಷ : ಅಧ್ಯಕ್ಷ ಸ್ಥಾನ ನಯವಾಗಿಯೇ ತಿರಸ್ಕರಿಸಿದ ಸಂಸದ ಪ್ರಜ್ವಲ್ ರೇವಣ್ಣ

ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರಿಂದ ನೈತಿಕ ಹೊಣೆಹೊತ್ತು ಜೆಡಿಎಸ್ ಯುವಘಟಕ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಯುವಘಟಕದ ಅಧ್ಯಕ್ಷ ಸ್ಥಾನದ ಆಯ್ಕೆ ಕುರಿತು ಭಾರಿ ಚರ್ಚೆ ಆರಂಭವಾಗಿದೆ.
ಯುವಬಳಗವನ್ನ ಸಂಘಟಿಸುವಲ್ಲಿ ವೈಫಲ್ಯ ಕಂಡಿದ್ದ ನಿಖಿಲ್ ಕುಮಾರಸ್ವಾಮಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಯುವಘಟಕ ಸ್ಥಾನಕ್ಕೆ ಹೊಸನೇಮಕಕ್ಕೆ ಪಕ್ಷದ ವಲಯದಲ್ಲಿ ಚರ್ಚೆ ಆರಂಭವಾಗಿದೆ.

ಆ ಸ್ಥಾನಕ್ಕೆ ಪ್ರಜ್ವಲ್ ರೇವಣ್ಣ ಸೂಕ್ತ ಎಂದು ಪಕ್ಷದ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದ್ದು, ಲೋಕಸಭಾ ಸದಸ್ಯರಾಗಿರುವ ಪ್ರಜ್ವಲ್ ರೇವಣ್ಣ ಅವರು, ಹಳೇ ಮೈಸೂರು ಭಾಗದಲ್ಲಿ ತನ್ನದೇ ಪ್ರಾಬಲ್ಯ ಹೊಂದಿದ್ದಾರೆ.
ಪಕ್ಷ ಸಂಘಟನೆ ದೃಷ್ಟಿಯಿಂದ ಪ್ರಜ್ವಲ್ ರೇವಣ್ಣ ಸೂಕ್ತ ಎಂದು ಅನೇಕ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಯುವಘಟಕ ಅಧ್ಯಕ್ಷ ಸ್ಥಾನವನ್ನು ನಯವಾಗಿಯೇ ಪ್ರಜ್ವಲ್ ರೇವಣ್ಣ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಲೋಕಸಭಾ ಚುನಾವಣೆಗೆ ಇನ್ನೊಂದು ವರ್ಷ ಮಾತ್ರ ಬಾಕಿ ಉಳಿದಿದ್ದು, ಯುವಘಟಕ ಅಧ್ಯಕ್ಷರಾದರೆ ಹಾಸನವನ್ನು ಹೆಚ್ಚಾಗಿ ಕೇಂದ್ರಿಕರಿಸಲು ಆಗುವುದಿಲ್ಲ, ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಪ್ರಜ್ವಲ್ ರೇವಣ್ಣ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜ್ವಲ್ ರೇವಣ್ಣ ನಿರಾಕರಿಸಿದ ಹಿನ್ನೆಲೆ ಹೊಸ ಹೆಸರು ಮುನ್ನಲೆಗೆ ಬಂದಿದ್ದು, ಗುರುಮಿಟ್ಕಲ್ ಶಾಸಕ ಶರಣಗೌಡ ಕಂದಕೂರ್ ಅಧ್ಯಕ್ಷರಾಗಿ ನೇಮಕ ಸಾಧ್ಯತೆ ಇದೆ. ಯುವಘಟಕದ ಉಪಾಧ್ಯಕ್ಷರಾಗಿರುವ ಕಂದಕೂರು, ಯುವ ವರ್ಚಸ್ಸು ಹೊಂದಿದ್ದಾರೆ. ಈ ಬಾರಿ ಶಾಸಕರಾಗಿ ಆಯ್ಕೆಯಾಗಿ ಮತ್ತಷ್ಟು ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೂ ಪ್ರಾತಿನಿಧ್ಯ ನೀಡಿದ ಲೆಕ್ಕಾಚಾರದಲ್ಲಿ ಕಂದಕೂರ್‌ಗೆ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ. ಇದು ಪಕ್ಷದ ವರಿಷ್ಠ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಲೆಕ್ಕಾಚಾರವೂ ಆಗಿದೆ ಎಂದು ಪಕ್ಷದ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.

More News