TEXT BOOK REVISE VERY SOON: ಶಾಲಾ ಮಕ್ಕಳಿಗೆ ಅವಶ್ಯಕತೆ ಇರುವುದನ್ನು ಮಾತ್ರ ಪಠ್ಯದಲ್ಲಿ ಉಳಿಸಲಾಗುವುದು : ಮಧುಬಂಗಾರಪ್ಪ

ಬೆಂಗಳೂರು : ಶಾಲಾ ಪಠ್ಯಪುಸ್ತಕ ಈ ವರ್ಷವೇ ಪರಿಷ್ಕರಣೆಯಾಗಿದೆ. ಆದರೂ ಕೂಡ ಶಾಲಾ ಮಕ್ಕಳಿಗೆ ಅವಶ್ಯಕತೆ ಇಲ್ಲದಿದ್ದನ್ನು ತಜ್ಞರು ಪರಿಶೀಲಿಸಿ ವರದಿ ನೀಡಿದ ಬಳಿಕ, ಅದನ್ನು ಸಂಪುಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಸಂಪುಟದಲ್ಲೇ ಈ ವಿಚಾರದ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು, ಈ ಹಿಂದೆಯೂ ಸಪ್ಲಿಮೆಂಟರಿ ಪರಿಷ್ಕರಣೆ ನಡೆದಿದೆ, ಅದೇ ರೀತಿಯಲ್ಲಿ ಈ ಬಾರಿಯೂ ಅವಶ್ಯ ಬಿದ್ದಲ್ಲಿ ಮಾಡಲಾಗುವುದು ಅನಾವಶ್ಯಕ ಮಕ್ಕಳಿಗೆ ಒತ್ತಡ ಬೇಡ ಎಂದು ಮನವಿ ಮಾಡಿದರು.
ಆರಂಭದಲ್ಲಿ ಸೇತು ಬಂಧ ಇರಲಿದ್ದು, ಪಠ್ಯದಲ್ಲಿ ಏನು ಓದಿಸಬೇಕು, ಯಾವುದು ಬೇಡ ಎಂಬುದನ್ನು ನಿರ್ಧರಿಸಲಾಗುತ್ತದೆ. ಇದು ಬಹಳ ಸೂಕ್ಷ್ಮ ವಿಚಾರ. ಮಕ್ಕಳ ಹಿತದೃಷ್ಟಿಯಿಂದ ಕ್ರಮ ತೆಗೆದುಕೊಳ್ಳುತ್ತೇವೆ‌. ಮಕ್ಕಳ ಭವಿಷ್ಯಕ್ಕೆ ಒಳ್ಳೆಯದನ್ನು ಉಳಿಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.

ಪಠ್ಯ ಪರಿಷ್ಕರಣೆಯಾಗಬೇಕೆಂದು ಸಾಹಿತಿಗಳು ಸಿಎಂಗೆ ಮನವಿ ನೀಡಿದ್ದಾರೆ. ಮುಖ್ಯಮಂತ್ರಿಯವರು ಕೂಡ ಆಸಕ್ತಿ ತೋರಿಸಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಅದನ್ನು ಮಾಡಲಾಗುವುದು ಎಂದು ತಿಳಿಸಿದರು.
ಈ ವಿಷಯದಲ್ಲಿ ಮುಖ್ಯಮಂತ್ರಿಯವರೇ ವಿಶೇಷ ಮುತುವರ್ಜಿ ವಹಿಸಿರುವುದು ಖುಷಿಯ ವಿಚಾರ ಎಂದು ಹೇಳಿದ ಮಧು ಬಂಗಾರಪ್ಪ, ತಜ್ಞರು ಪಕ್ಷಕ್ಕೆ ಸೀಮಿತವಾಗಿರಲ್ಲ. ಅವರು ಕೊಡುವ ಸಲಹೆ ಪರಿಗಣಿಸಲಾಗುತ್ತದೆ. ಪಠ್ಯದಲ್ಲಿರುವ ತಪ್ಪು ತಿಳುವಳಿಕೆಯನ್ನು ತಕ್ಷಣ ತಡೆ ಹಿಡಿಯಬೇಕಾಗುತ್ತದೆ. ಅದನ್ನು ನಾವು ಮಾಡುತ್ತೇವೆ ಎಂದರು.
ಯಾವ ಪಠ್ಯ ಬೇಡ ಎಂದು ತಜ್ಞರು ಸೂಚಿಸುತ್ತಾರೋ ಅದನ್ನು ಬೋಧಿಸದಂತೆ ತಿಳಿಸಲು ಅವಕಾಶವಿದೆ. ಶಿಕ್ಷಕರ ನೇಮಕದಲ್ಲಿ ಎರಡು ಸಮಸ್ಯೆ ಇದೆ. ಕಾನೂನಿನ ತೊಡಕಿದೆ ಅದನ್ನು ಎಜಿ ಜತೆ ಚರ್ಚೆ ಮಾಡಲಾಗುವುದು, ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರೇ ಸಮಸ್ಯೆಗೆ ಪರಿಹಾರವಲ್ಲ. ಹೀಗಾಗಿ ಆದಷ್ಟು ಬೇಗನೇ ಈ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.

More News