ರಾಜೀನಾಮೆ ಸಂದೇಶ ರವಾನಿಸಿದ ಬಿಜೆಪಿ ಶಾಸಕ ಮಸಾಲ ಜಯರಾಂ

ತುಮಕೂರು :ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ತುರುವೆಕೆರೆ ಬಿಜೆಪಿ ಶಾಸಕ ಮಸಾಲ ಜಯರಾಂ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ. ಈ ಹಿಂದೆ ಕೆಲವರ ನಡವಳಿಕೆಯಿಂದ ಬೇಸತ್ತು ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುರೇಶ್ ಗೌಡ ರಾಜೀನಾಮೆ ಸಲ್ಲಿಸಿದ್ದರು.
ತುಮಕೂರಿನಲ್ಲಿ ಮಾತನಾಡಿದ ಅವರು, ನಾನೇನು ಸಚಿವ ಸ್ಥಾನನೀಡಿ ಎಂದು ಪಕ್ಷದ ವರಿಷ್ಠರಲ್ಲಿ ಕೇಳುತ್ತಿಲ್ಲ, ಬದಲಾಗಿ ಉತ್ತಮವಾದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಎಂದು ಕೇಳಿಕೊಂಡಿದ್ದೇನೆ, ಇದನ್ನು ನೀಡದೇ ಇದ್ದಲ್ಲಿ ಬಿಜೆಪಿ ಶಾಸಕ ಸ್ಥಾನ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಎಲ್ಲೋ ಒಂದು ಕಡೆ ಬಿಜೆಪಿ ನನಗೆ ದ್ರೋಹ ಮಾಡುತ್ತಿದೆ ಅನ್ನುವ ಮಟ್ಟಕ್ಕೆ ಬಂದಿದೆ. ನಾವು ಹೇಳೋದೆಲ್ಲ ಕೇಳಿಕೊಂಡು ಬಂದಿದ್ದೇವೆ. ನಿಗಮ ಮಂಡಳಿ ನೀಡುವಂತೆ ರಾಜ್ಯಾಧ್ಯಕ್ಷರನ್ನು ಕೂಡ ಕೇಳಿದ್ದೇವೆ, ಮುಖ್ಯಮಂತ್ರಿ ಅವರನ್ನೂ ಕೇಳಿದ್ದೇವೆ. ಆದರೆ ಅವರೂ ಕಡೆಗಣಿಸಿದರೆ ಯಾವ ಕಾರಣಕ್ಕೂ ಪಕ್ಷದಲ್ಲಿ ಇರೋದಕ್ಕೆ ಆಗುವುದಿಲ್ಲ ಎಂದು ಮಸಾಲ ಜಯರಾಂ ಎಚ್ಚರಿಕೆ ನೀಡಿದ್ದಾರೆ.
ನಿಗಮ ಮಂಡಳಿಗೆ ಬೇಡಿಕೆ
ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನನಗೆ ನೀಡದೇ ಇದ್ದರೆ ಪಕ್ಷದಲ್ಲೇ ಇರಲು ಸಾಧ್ಯವಿಲ್ಲ ಎಂದು ತಿಳಿಸಿದ ಜಯರಾಂ, ರಾಜಕೀಯ ಬದುಕನ್ನೇ ಅಂತ್ಯ ಮಾಡ್ತೀವಿ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಈ ತಿಂಗಳ ಅಂತ್ಯದವರೆಗೂ ಗಡುವು ನೀಡಲಾಗಿದೆ, ನವಂಬರ್ ಅಂತ್ಯದವರೆಗೂ ನೋಡ್ತೀವಿ, ನಾವೇನೂ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಒಳ್ಳೆಯ ನಿಗಮ ಮಂಡಳಿ ಕೊಡಿ ಎಂದು ಕೇಳಿದ್ದೇವೆ. ಕೊಟ್ರೆ ಕೊಡಲಿ ಇಲ್ಲಾ ಅಂದ್ರೆ ನಾವು ಏನ್ ಮಾಡಬೇಕೋ ಮಾಡ್ತೀವಿ ಎಂದು ಬಹಿರಂಗವಾಗಿಯೇ ಶಾಸಕ ಮಸಾಲ ಜಯರಾಂಸವಾಲು ಹಾಕಿದ್ದಾರೆ.

ಜನ ಓಟ್ ಹಾಕಿದ್ದಾರೆ, ಅವರಿಗೆ ತೃಪ್ತಿ ಆಗೋ ಹಾಗೇ ಕೆಲಸ ಮಾಡಿದ್ದೇನೆ. ಈ ತಿಂಗಳ ಗಡವು ಕೊಡ್ತೀನಿ ಕೊಟ್ರೆ ಕೊಡಲಿ ಕೊಡಲಿಲ್ಲ ಅಂದ್ರೆ ಬೇಡ. ನನಗೆ ಏನೂ ಇಲ್ಲದೆಯೂ ಕೆಲಸ ಮಾಡೋ ತಾಕತ್ತಿದೆ ಎಂದು ಹೇಳ್ತಿದ್ದೇನೆ. ಯಾವುದಾದ್ರು ಸರಿ ಒಳ್ಳೆಯದೊಂದು ನಿಗಮ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಈಗಾಗಲೇ ಸುರೇಶ್ ಗೌಡ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿರುವುದರಿಂದ ಆ ಸ್ಥಾನ ನೀಡಿದರೆ ನಿರ್ವಹಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಜಿಲ್ಲಾಧ್ಯಕ್ಷ ಸ್ಥಾನ ಬೇಡ ಎಂದು ಸ್ಪಷ್ಟಪಡಿಸಿದರು.

More News