IND vs WI: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ರೋಹಿತ್ ನಾಯಕತ್ವದ ಭವಿಷ್ಯ ನಿರ್ಧಾರ?

ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಸೋಲಿನ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಆದರೆ ಹಿಟ್ ಮ್ಯಾನ್ ಸಾರಥ್ಯಕ್ಕೆ ತತಕ್ಷಣದಲ್ಲಿ ಯಾವುದೇ ಆತಂಕ ಇಲ್ಲದಿದ್ದರೂ, ಸಾಂಪ್ರದಾಯಿಕ ಕ್ರಿಕೆಟ್‌ನಲ್ಲಿ ತಮ್ಮ ನಾಯಕತ್ವದ ಮೇಲೆ ಎದ್ದಿರುವ ಪ್ರಶ್ನೆಯನ್ನ ಹೋಗಲಾಡಿಸಲು ವೆಸ್ಟ್ ಇಂಡೀಸ್‌ ಪ್ರವಾಸದಲ್ಲಿ ಗಮನಾರ್ಹ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.

ಲಂಡನ್‌ನ ಓವಲ್ ಮೈದಾನದಲ್ಲಿ ನಡೆದ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲಿನ ಆಘಾತ ಅನುಭವಿಸಿರುವ ಭಾರತ ಸದ್ಯ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದೆ. ಇದಾದ ಬಳಿಕ ಜುಲೈ ಮಧ್ಯಂತರದಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಿರುವ ಟೀಂ ಇಂಡಿಯಾ ಆಟಗಾರರು ವಿಂಡೀಸ್ ವಿರುದ್ಧ ಎರಡು ಟೆಸ್ಟ್‌ ಪಂದ್ಯಗಳನ್ನ ಆಡಲಿದ್ದು, ಇದರಲ್ಲಿ ಬಹುತೇಕ ರೋಹಿತ್ ಶರ್ಮಾ ಅವರೇ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್‌ನಲ್ಲಿ ಎರಡು-ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನ ಮುನ್ನಡೆಸುವ ರೋಹಿತ್ ಶರ್ಮಾ ಅವರ ಪ್ರದರ್ಶನದ ಆಧಾರದ ಮೇಲೆ ಬಿಸಿಸಿಐ ಹಿಟ್ ಮ್ಯಾನ್ ನಾಯಕತ್ವದ ಭವಿಷ್ಯವನ್ನ ನಿರ್ಧರಿಸುವ ಸಾಧ್ಯತೆ ಹೆಚ್ಚಾಗಿದೆ.

ಆದರೆ ಭಾರತ ತಂಡದಲ್ಲಿ ಪ್ರಸ್ತುತ ನಡೆಯುತ್ತಿರುವ ಗೌಪ ಬೆಳವಣಿಗೆಗಳ ನಡುವೆ, ಜುಲೈ 12ರಿಂದ ಡೊಮಿನಿಕಾದಲ್ಲಿ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ದೂರವಿರಲು ಸ್ವತಃ ರೋಹಿತ್ ಶರ್ಮಾ ನಿರ್ಧರಿಸದಿದ್ದರೆ, ಕೆರೆಬಿಯನ್ ಅಂಗಳದಲ್ಲಿ ಅವರೇ ತಂಡವನ್ನ ಮುನ್ನಡೆಸುತ್ತಾರೆ. ಒಂದೊಮ್ಮೆ ರೋಹಿತ್ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ವಿಂಡೀಸ್ ಪ್ರವಾಸದಲ್ಲಿ ತಂಡದ ನಾಯಕತ್ವ ಹೊತ್ತು ತಂಡವನ್ನ ಮುನ್ನಡೆಸಿದ್ದೇ ಆದಲ್ಲಿ, ಎರಡು ಟೆಸ್ಟ್‌ಗಳಲ್ಲಿ ಕನಿಷ್ಠ ಒಂದು ದೊಡ್ಡ ಇನ್ನಿಂಗ್ಸ್ ಕಟ್ಟಲು ಅವರು ವಿಫಲವಾದರೆ ಬಿಸಿಸಿಐ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿ ಭಾರತ ತಂಡದ ಟೆಸ್ಟ್ ನಾಯಕತ್ವದ ವಿಚಾರದಲ್ಲಿ ಕಠಿಣ ನಿರ್ಧಾರವನ್ನ ತೆಗೆದುಕೊಳ್ಳಬೇಕಾದ ಒತ್ತಡಕ್ಕೆ ಒಳಗಾಗುತ್ತದೆ.

ಪ್ರಸ್ತುತ ಸನ್ನಿವೇಶದಲ್ಲಿ ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಬೇಕು ಎಂಬುದು ಆಧಾರ ರಹಿತ ಸಂಗತಿ. ಆದರೆ, 2025ರಲ್ಲಿ ನಡೆಯಲಿರುವ 3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಕೊನೆಗೊಳ್ಳುವ ವೇಳೆಗೆ ರೋಹಿತ್ ಶರ್ಮಾ, 38 ವರ್ಷ ವಯಸ್ಸಿನವರಾಗಿರುತ್ತಾರೆ. ಹೀಗಾಗಿ ಅವರು ಸಂಪೂರ್ಣ ಎರಡು ವರ್ಷಗಳ WTC ಚಕ್ರವನ್ನು ನಿರ್ವಹಿಸುತ್ತಾರೆಯೇ ಎಂಬುದು ಬಿಸಿಸಿಐ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ. ಈ ಕಾರಣದಿಂದಾಗಿ ವೆಸ್ಟ್ ಇಂಡೀಸ್ ‌ವಿರುದ್ಧದ ಎರಡು ಟೆಸ್ಟ್‌ಗಳ ನಂತರ ಮತ್ತು ಅವರ ಬ್ಯಾಟಿಂಗ್ ಫಾರ್ಮ್ ಗಮನಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಮುಂದಾದಂತಿದೆ.

ಆದರೆ, ವೆಸ್ಟ್ ಇಂಡೀಸ್ ಪ್ರವಾಸದ ನಂತರ ಸೌತ್ ಆಫ್ರಿಕಾ ಪ್ರವಾಸಕ್ಕೆ ತೆರಳುವವರೆಗೂ ಅಂದರೆ 2023ರ ಡಿಸೆಂಬರ್ ಅಂತ್ಯದವರೆಗೆ ಭಾರತ ತಂಡಕ್ಕೆ ಯಾವುದೇ ಟೆಸ್ಟ್‌ ಪಂದ್ಯಗಳಿಲ್ಲಿ. ಹೀಗಾಗಿ ತಂಡದ ನಾಯಕತ್ವದ ವಿಷಯದ ಬಗ್ಗೆ ಚರ್ಚಿಸಿ ತೀರ್ಮಾ‌ನ ಮಾಡಲು ಆಯ್ಕೆದಾರರಿಗೆ ಸಾಕಷ್ಟು ಸಮಯವಿದೆ. ಈ ವೇಳೆಗೆ ಬಿಸಿಸಿಐಗೆ ಹೊಸ ಅಧ್ಯಕ್ಷರ ಆಯ್ಕೆಯಾಗಿ ಹೊಸ ಸಮಿತಿ ಆಯ್ಕೆಯಾಗುವ ನಿರೀಕ್ಷೆ ಇರುವುದರಿಂದ, ಟೀಂ ಇಂಡಿಯಾದ ನಾಯಕತ್ವದ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ.

ಒಟ್ಟಾರೆ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಉಂಟಾಗಿರುವ ಪ್ರಶ್ನೆಗಳಿಗೆ ವಿಂಡೀಸ್ ಪ್ರವಾಸದಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ. ಆದರೆ ಇವೆಲ್ಲದರ ನಡುವೆ ಹಿಟ್ ಮ್ಯಾನ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಸಹ ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಬಿಸಿಸಿಐ ಸಹ ಪ್ರಸ್ತುತ ಪರಿಸ್ಥಿತಿಯಲ್ಲಿ ಟೆಸ್ಟ್ ತಂಡಕ್ಕೆ ಹೊಸ ಕ್ಯಾಪ್ಟನ್ ಆಯ್ಕೆ ಮಾಡುವ ವಿಷಯದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇದ್ದಂತೆ ತೋರುತ್ತಿಲ್ಲ. ಆದರೆ ಈ ಎಲ್ಲಾ ಲೆಕ್ಕಾಚಾರಗಳ ನಡುವೆಯ ಭಾರತ ಟೆಸ್ಟ್ ತಂಡಕ್ಕೆ ಹೊಸ ಕ್ಯಾಪ್ಟನ್ ಹುಡುಕಬೇಕಾದ ಅನಿವಾರ್ಯತೆ ಎದುರಾದರೆ ಈ ಜವಾಬ್ದಾರಿ ಯಾರಿಗೆ ನೀಡಲಾಗುತ್ತದೆ ಎಂಬುದು ಸಹ ದೊಡ್ಡ ಪ್ರಶ್ನೆಯಾಗಿದೆ.

More News