ಮಂಗಳೂರು: ಕರಾವಳಿ ಎಂದರೆ ತಕ್ಷಣ ನೆನಪಾಗೋದು ಅಲ್ಲಿನ ವಿಭಿನ್ನ ರೀತಿಯ ಸಂಸ್ಕೃತಿ, ಹುಲಿವೇಷದ ನೃತ್ಯ. ದಸರಾ ಹಬ್ಬ ಬಂತೆಂದರೆ ನೆನಪಿಗೆ ಬರೋದೇ ಹುಲಿ ವೇಷದ ಸೊಬಗಿನ ಮೆರುಗು. ಬ್ಯಾಂಡ್, ತಾಸೆಗಳ ಲಯ ಬದ್ಧವಾದ ವಾದನಕ್ಕೆ ಬಣ್ಣ ಬಣ್ಣದ ಹುಲಿಗಳ ನರ್ತನ ನೋಡುಗರ ಮೈನವೀರೇಳುವಂತೆ ಮಾಡುತ್ತದೆ.
ತಾಸೆಗಳ ಟರ್ರ್ ಟರ್ರ್ ಟರ್ರರ್ರ…. ಟರ್ರರ್ರ… ಎಂಬ ಧ್ವನಿ ಯಾರ ಕಿವಿಗೆ ಬಿದ್ದರೂ ಒಂದು ರೀತಿಯ ರೋಮಾಂಚನ, ಈ ಬ್ಯಾಂಡ್ ಸದ್ದಿಗೆ ಯಾರನ್ನಾದರೂ ಒಂದು ಸಲ ಹೆಜ್ಜೆ ಹಾಕಲು ಪ್ರೆರೇಪಿಸುತ್ತದೆ. ಹಾಗೆನೇ, ಕಣ್ಣು ನಿಮಿರಿಸಿ ಹುಲಿ ವೇಷದತ್ತ ನೋಡಲು ಮನಸ್ಸು ಕಾತರದಿಂದಿರುತ್ತದೆ. ಅಂತಹ ಆಕರ್ಷಣೆ ಹುಲಿ ವೇಷದಲ್ಲಿದೆ.
ಕರಾವಳಿ ದಸರಾದಲ್ಲಿ ಹುಲಿ ವೇಷದ ಮೆರುಗು ಕರಾವಳಿಯಲ್ಲಿ ಆಧುನಿಕತೆಯ ಎಂತಹ ಗಾಳಿ ಬೀಸಿದರೂ ಇಂದಿಗೂ ಈ ಹುಲಿ ವೇಷದ ಕುಣಿತ ತನ್ನ ಪ್ರಸಿದ್ಧಿಯನ್ನು ಹಾಗೆಯೇ ಉಳಿಸಿಕೊಂಡಿದೆ. ಪಟ್ಟೆ ಹುಲಿ, ಚಿಟ್ಟೆ ಹುಲಿ, ತಾಯಿ ಹುಲಿ, ಶಾರ್ದೂಲ ಹೀಗೆ ವಿವಿಧ ಹುಲಿಗಳ ಬಣ್ಣಗಳನ್ನು ಮೈಮೇಲೆ ಬಳಿದುಕೊಂಡ ಹುಲಿ ವೇಷ ನರ್ತಕರು, ಕುಣಿಯುತ್ತಾ ವಿವಿಧ ಕಡೆಗಳಲ್ಲಿ ಸುತ್ತುತ್ತಾ ಜನರನ್ನು ರಂಜಿಸಿದ್ದಾರೆ.

ಕೇವಲ ಆರಾಧನಾ ದೃಷ್ಟಿಯಿಂದ ಹಾಗೂ ಹರಕೆ ಕಟ್ಟಿಕೊಂಡು ಹುಲಿ ವೇಷ ಧರಿಸಿ ಜನರನ್ನು ರಂಜಿಸಿ ಅವರು ನೀಡಿದ ಸಂಭಾವನೆ ಪಡೆಯುತ್ತಿದ್ದ ಈ ಕಲೆ ಎಷ್ಟು ಪ್ರಸಿದ್ಧಿ ಹೊಂದಿದೆ ಎಂದರೆ ಚಲನಚಿತ್ರಗಳಲ್ಲೂ ಈ ಹುಲಿ ವೇಷ ತನ್ನದೇ ಆದ ಛಾಪು ಮೂಡಿಸಿದೆ.
ಅದಲ್ಲದೆ ಪ್ರದರ್ಶನದ ಕಲೆಯಾಗಿ ಬಹುದೊಡ್ಡ ಮಟ್ಟದಲ್ಲಿ ಕರಾವಳಿಯಲ್ಲಿ ಆಯೋಜನೆಗೊಳ್ಳುತ್ತಿದೆ. ಒಟ್ಟಿನಲ್ಲಿ ಕೇವಲ ಜನರಂಜನೆ, ಆರಾಧನೆ, ಹರಕೆ ಎಂಬಂತಹ ನೆಲೆಯಲ್ಲಿ ಹುಟ್ಟಿಕೊಂಡ ಕಲೆಯೊಂದು ವಿಭಿನ್ನ ಆಯಾಮವನ್ನು ಪಡೆದು ನಿರೀಕ್ಷೆಗೂ ಮೀರಿ ಬೆಳೆದು ನಿಂತಿದೆ.
ರಾಜ್ಯ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಮಾರ್ಗದರ್ಶನದಲ್ಲಿ, ಮಂಗಳೂರು ದಕ್ಷಿಣ ಹಾಗೂ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ತಾಸೆದ ಪೆಟ್ಟ್ ಆಯೋಜಿಸಲಾಗಿತ್ತು.




