ಆಸ್ಟ್ರೇಲಿಯ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಸೋಲಿನ ಬಳಿಕ ಟೀಂ ಇಂಡಿಯಾ ಆಟಗಾರರು ವಿಶ್ರಾಂತಿಯಲ್ಲಿದ್ದು, ಇದರ ಬೆನ್ನಲ್ಲೇ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡದ ಆಯ್ಕೆಗಾಗಿ ಸದ್ದಿಲ್ಲದೆ ತಯಾರಿ ನಡೆಯುತ್ತಿದೆ.
ಪ್ರಸಕ್ತ 2023-24ರ ಸಾಲಿನ ದೇಶೀಯ ಕ್ರಿಕೆಟ್ ಋತುವಿನ ಮೊದಲ ಟೂರ್ನಿ ದುಲೀಪ್ ಟ್ರೋಫಿ ಆರಂಭಕ್ಕೂ ಮುನ್ನ ದಿನ ರಾಷ್ಟ್ರೀಯ ಕ್ರಿಕೆಟ್ ಆಯ್ಕೆಗಾರರು, ವಿಂಡೀಸ್ ಪ್ರವಾಸಕ್ಕೆ ಭಾರತ ತಂಡವನ್ನ ಆಯ್ಕೆ ಮಾಡಲು ಎಲ್ಲಾ ತಯಾರಿಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಕೆರೆಬಿಯನ್ನರ ವಿರುದ್ಧ ನಡೆಯುವ ಸರಣಿಗೆ ಟೀಂ ಇಂಡಿಯಾದ ಪ್ರಮುಖ ಆಟಗಾರರಾದ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ವೇಗಿಗಳಾದ ಮೊಹಮದ್ ಶಮಿ ಮತ್ತು ಮೊಹಮದ್ ಸಿರಾಜ್‌ಗೆ ಬಹುತೇಕ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ.
ನಾಯಕ ರೋಹಿತ್ ಶರ್ಮ ಇತ್ತೀಚೆಗೆ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಐಪಿಎಲ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್‌ನಲ್ಲಿ ಹಿಟ್ ಮ್ಯಾನ್ ಅವರಿಂದ ದೊಡ್ಡ ಇನಿಂಗ್ಸ್ ಬಂದಿಲ್ಲ. ಹೀಗಾಗಿ ಅವರನ್ನು ಸಂಪೂರ್ಣ ಪ್ರವಾಸದಲ್ಲಿ ಆಡಿಸದೆ ಟೆಸ್ಟ್ ಅಥವಾ ಸೀಮಿತ ಓವರ್ ಕ್ರಿಕೆಟ್ ಸರಣಿಯಿಂದ ವಿಶ್ರಾಂತಿ ನೀಡಲು ಆಯ್ಕೆಗಾರರು ಚಿಂತನೆ ನಡೆಸಿದ್ದಾರೆ. ಈ ಸಂಬಂಧ ರೋಹಿತ್ ಶರ್ಮ ಜತೆಗೆ ಚರ್ಚಿಸಿ ಆಯ್ಕೆಗಾರರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಒಂದೊಮ್ಮೆ ಆಯ್ಕೆದಾರರು ರೋಹಿತ್ ಶರ್ಮ ಅವರಿಗೆ ಟೆಸ್ಟ್ ಸರಣಿಯಿಂದ ವಿಶ್ರಾಂತಿ ನೀಡಿದರೆ, ಅನುಭವಿ ಬ್ಯಾಟರ್ ಅಜಿಂಕ್ಯಾ ರಹಾನೆ ಹಂಗಾಮಿ ನಾಯಕರಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ. ಇತ್ತೀಚೆಗೆ ಟೆಸ್ಟ್ ತಂಡಕ್ಕೆ ಪುನರಾಗಮನ ಕಂಡಿರುವ ರಹಾನೆ, ಟೆಸ್ಟ್ ಚಾಂಪಿಯನ್ಷಿಪ್ ಫೈನಲ್‌ನಲ್ಲಿ 89 ಮತ್ತು 46 ರನ್ ಗಳಿಸಿ ಮಿಂಚಿದ್ದರು. ವೇಗಿಗಳಾದ ಮೊಹಮದ್ ಶಮಿ ಮತ್ತು ಸಿರಾಜ್ ಅವರಲ್ಲೂ ಒಬ್ಬರಿಗೆ ಟೆಸ್ಟ್ ಸರಣಿಯಿಂದ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ಇನ್ನೂ ರೋಹಿತ್ ಜತೆಗೆ ವಿರಾಟ್ ಕೊಹ್ಲಿ ಅವರನ್ನು ಸಹ ಟೆಸ್ಟ್ ಸರಣಿಯಿಂದ ಕೈಬಿಟ್ಟ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಒಂದೊಮ್ಮೆ ಕೊಹ್ಲಿ ಅವರನ್ನ ಕೈಬಿಟ್ಟಿದ್ದೇ ಆದಲ್ಲಿ ಚೇತೇಶ್ವರ ಪೂಜಾರ ಅವರಿಗೆ ಮತ್ತೊಮ್ಮೆ ತಂಡದಲ್ಲಿ ಲಭಿಸುವ ಸಾಧ್ಯತೆ ಇದೆ.
ಈ ನಡುವೆ ವಿಂಡೀಸ್ ಪ್ರವಾಸದಲ್ಲಿ ಹಲವು ಹೊಸ ಮುಖಗಳಿಗೂ ಭಾರತ ತಂಡದಲ್ಲಿ ಸ್ಥಾನ ಲಭಿಸುವ ನಿರೀಕ್ಷೆ ಇದೆ. ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಎಡಗೈ ವೇಗಿ ಅರ್ಷದೀಪ್ ಸಿಂಗ್, ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮನ್, ವೇಗಿ ಉಮ್ರಾನ್ ಮಲಿಕ್, ಋತುರಾಜ್ ಗಾಯಕ್ವಾಡ್, ರಿಂಕು ಸಿಂಗ್, ಹರ್ಷಲ್ ಪಟೇಲ್ ಅವರುಗಳು ಸಹ ಟೆಸ್ಟ್, ಏಕದಿನ ಅಥವಾ ಟಿ20 ತಂಡಗಳಿಗೆ ಆಯ್ಕೆ ಮಾಡುವ ಸಾಧ್ಯತೆ ಕೂಡ ಇದೆ.
ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯು 2023-25ರ ಸಾಲಿನ ಡಬ್ಲ್ಯುಟಿಸಿ ಆವೃತ್ತಿಯಲ್ಲಿ ಭಾರತಕ್ಕೆ ಮೊದಲ ಸವಾಲಾಗಿದೆ. ಉಭಯ ತಂಡಗಳ ನಡುವಿನ ಈ ಸರಣಿ ಜುಲೈ 12ರಿಂದ ಟೆಸ್ಟ್ ಪಂದ್ಯದ ಮೂಲಕ ಆರಂಭಗೊಳ್ಳಲಿದ್ದು, 2 ಪಂದ್ಯಗಳ ಟೆಸ್ಟ್ ಸರಣಿಯ ನಂತರದಲ್ಲಿ 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿ ನಡೆಯಲಿದೆ.




