ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಬಿಜೆಪಿಯಲ್ಲೀಗ ಯಾವುದೂ ಸರಿಯಿಲ್ಲ ಎಂಬುದು ರುಜುವಾತಾಗಿದೆ. ಮತ್ತೆ ಗೆದ್ದು ಅಧಿಕಾರದ ಗದ್ದುಗೆ ಹಿಡಿಯುತ್ತೇವೆ ಎಂಬ ಮಿತಿಮೀರಿದ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿಗೆ ಚುನಾವಣೆಯಲ್ಲಿ ಆದ ಸೋಲು ಅರಗಿಸಿಕೊಳ್ಳಲು ಆಗುತ್ತಿಲ್ಲ. ಒಬ್ಬರ ಮೇಲೆ ಮತ್ತೊಬ್ಬರ ಕಾಲನ್ನು ಎಳೆಯುವುದರಲ್ಲೇ ಮಗ್ನರಾಗಿದ್ದಾರೆ.
ಅತ್ಯಂತ ಹೀನಾಯ ಸೋಲಿಗೆ ಬಿಜೆಪಿಯಲ್ಲಿಯೇ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದಾರೆ. ಸೋತು ಸುಣ್ಣವಾಗಿರುವ ಬಿಜೆಪಿ ನಾಯಕರು ಪುಟಿದೆದ್ದು ಆತ್ಮವಿಶ್ವಾಸದಿಂದ ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜಾಗಬೇಕಾಗಿತ್ತು. ಆದರೆ, ಬಿಜೆಪಿ ಪಕ್ಷದಲ್ಲಿ ಸೂತಕದ ಛಾಯೆ ಆವರಿಸಿದೆ.
ಇದುವರೆಗೂ ಎಲ್ಲೂ ಕಾಣದ ಸಂಸದ ತೇಜಸ್ವಿ ಸೂರ್ಯ ಪಕ್ಷದಲ್ಲಿ ಸಕ್ರೀಯರಾಗಿದ್ದಾರೆ ಎಂಬಂತೆ ಫೋಸು ನೀಡುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯನ್ನು ಗುರಿಯನ್ನಾಗಿಸಿಕೊಂಡು ಅವರು ನಡೆಸುತ್ತಿರುವ ಪ್ರಚಾರದ ಪತ್ರಿಕಾಗೋಷ್ಛಿಗಳು ಕೇವಲ ಬಿಜೆಪಿ ಕೇಂದ್ರ ಕಚೇರಿಗೆ ಮಾತ್ರ ಸೀಮಿತವಾಗಿವೆ. ಇನ್ನು ರವಿಕುಮಾರ್, ಆರ್ ಅಶೋಕ್ ಬಿಟ್ಟರೆ ಬೇರೆ ಯಾರೂ ಕಾಣಸಿಗುವುದು ಕಷ್ಟಸಾಧ್ಯವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದರೂ ಇದುವರೆಗೂ ಬಿಜೆಪಿಯಲ್ಲಿ ಮಾತ್ರ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆದಿಲ್ಲ. ಈಗಾಗಲೇ ನೂತನ ಸರ್ಕಾರದ ಒಂದು ಅಧಿವೇಶನ ಪೂರ್ಣಗೊಂಡಿದೆ. ಆದರೆ. ಪ್ರತಿಪಕ್ಷದ ನಾಯಕರು ಯಾರು ಎನ್ನುವುದೇ ತಿಳಿಯದಾಗಿದೆ. ಇದಕ್ಕೆ ಸಾಕ್ಷಿ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟ, ಗುಂಪುಗಾರಿಕೆ ಕಾರಣವಾಗಿದೆ.
ಆಗಾಗ್ಗೆ ಲಿಂಗಾಯತರಿಗೆ ಈ ಸ್ಥಾನ ನೀಡಬೇಕು. ಇಲ್ಲಾ ಒಕ್ಕಲಿಗರಿಗೆ ನೀಡಬೇಕು ಎಂಬ ಕಚ್ಚಾಟದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವನ್ನು ಸಮರ್ಥವಾಗಿ ಎದುರಿಸುವ ನಾಯಕನ ಕೊರತೆ ಬಿಜೆಪಿಯಲ್ಲಿದೆಯಾ ಎಂಬ ಅನುಮಾನ ಇದೀಗ ಸಾರ್ವಜನಿಕರಲ್ಲಿ ಮೂಡಿದೆ.

ಕೆಲವೊಮ್ಮೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್, ಅಶ್ವತ್ಥ ನಾರಾಯಣ ಅವರ ಹೆಸರುಗಳು ಕೇಳಿಬರುತ್ತಿವೆ. ಆದರೆ, ಆಯ್ಕೆ ಪ್ರಕ್ರಿಯೆ ಮಾತ್ರ ಇದುವರೆಗೂ ನಡೆದಿಲ್ಲ. ಮುಂದಿನ ಅಧಿವೇಶನದೊಳಗೆ ಪ್ರತಿಪಕ್ಷದ ನಾಯಕನ ಆಯ್ಕೆಯಾಗಲಿದೆ ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿಬರುತ್ತಿವೆ. ಆದರೆ, ಆ ನಾಯಕರು ಯಾರು ಎನ್ನುವುದೇ ಮಾತ್ರ ಯಕ್ಷ ಪ್ರಶ್ನೆಯಾಗಿದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪ್ರತಿಪಕ್ಷದ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಬೇಕು ಎಂಬ ಆಶಯದಲ್ಲಿದ್ದಾರೆ. ಇದು ಬಹಿರಂಗವಾಗುತ್ತಿದ್ದಂತೆಯೇ ಬೊಮ್ಮಾಯಿ ವಿರುದ್ಧ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕೀಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತು. ಇದನ್ನು ಬಹಿರಂಗವಾಗಿಯೇ ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಶಾಸಕ ಸಿ ಟಿ ರವಿ ಆರೋಪಿಸಿದ್ದರು.

ಈ ಸುದ್ದಿ ಹೊರಬಿದ್ದು ಒಂದು ವಾರವೇ ಸಂದಿದೆ. ಇದುವರೆಗೂ ಆ ವಿಚಾರದಿಂದ ಬೊಮ್ಮಾಯಿ ಅವರು ಹೊರಬರಲು ಪಡುತ್ತಿರುವ ಕಷ್ಟ ಅವರಿಗೆ ಗೊತ್ತು. ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ವಿರುದ್ಧ ಪ್ರಬಲ ಅಸ್ತ್ರಗಳನ್ನು ಬಳಸಲಿಲ್ಲ ಹಾಗೂ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕೀಯ ಮಾಡಿ, ಪಕ್ಷ ಸೋಲು ಅನುಭವಿಸುವಂತಾಯಿತು ಎನ್ನುವುದು ಅವರ ವಾದ. ಬೊಮ್ಮಾಯಿಯವರ ಹೆಸರನ್ನು ನೇರವಾಗಿ ಹೇಳದಿದ್ದರು, ಪರೋಕ್ಷವಾಗಿ ಅವರನ್ನು ಇಬ್ಬರು ನಾಯಕರು ಮಾತಿನಿಂದ ಚುಚ್ಚಿದ್ದರು.

ಸಿ ಟಿ ರವಿ ಮತ್ತು ಪ್ರತಾಪ್ ಸಿಂಹ ಅವರ ಈ ಹೇಳಿಕೆಗೆ ಪರೋಕ್ಷವಾಗಿ ಪಕ್ಷ ಹಿರಿಯ ನಾಯಕರ ಬೆಂಬಲ ಇದ್ದಂತೆ ಕಾಣುತ್ತಿದೆ. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಭಾವವನ್ನು ಕಡಿಮೆ ಮಾಡುವ ಉದ್ದೇಶ ಈ ನಾಯಕರು ಹೊಂದಿದ್ದಾರೆ ಎನ್ನಲಾಗಿದೆ.
ಇದರ ನಡುವೆಯೇ ರಾಜ್ಯ ಬಿಜೆಪಿಯಲ್ಲಿ ತಮ್ಮ ಹಿಡಿತ ಸಾಧಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸತತ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಕೃಪಾಕಟಾಕ್ಷದ ಮೇರೆಗೆ ಅವರು ಈ ಆಸೆ ಹೊಂದಿದ್ದಾರೆ. ಹೇಗಾದರೂ ಮಾಜಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪ್ರಭಾವವನ್ನು ಪಕ್ಷದಲ್ಲಿ ಕಡಿಮೆ ಮಾಡುವ ಉದ್ದೇಶ ಇವರದ್ದಾಗಿದೆ ಎಂದು ಪಕ್ಷದಲ್ಲಿಯೇ ಕೇಳಿಬರುತ್ತಿರುವ ಮಾತಾಗಿದೆ.

ಪಕ್ಷದ ಹೀನಾಯ ಸೋಲಿನ ಬಳಿಕ ಕೇಂದ್ರದ ನಾಯಕರು ರಾಜ್ಯ ನಾಯಕರನ್ನು ಹತ್ತಿರಕ್ಕೂ ಸೇರಿಸುತ್ತಿಲ್ಲ. ಬದಲಾಗಿ ರಾಜ್ಯದಲ್ಲಿನ ಮುಖಂಡರ ನಡವಳಿಕೆಯನ್ನು ತೆರೆಮರೆಯಲ್ಲಿಯೇ ಗಮನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನದ ಆಯ್ಕೆ ಗೊಂದಲದ ಗೂಡಾಗಿದೆ. ವಿಧಾನ ಪರಿಷತ್ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕರುಗಳ ಆಯ್ಕೆಗೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ರಾಜ್ಯ ನಾಯಕರುಗಳಿಗೆ ತೀವ್ರ ಹಿನ್ನೆಡೆಯಾಗಿದ್ದು, ಒಂದು ಅಧಿವೇಶನ ಮುಗಿದರೂ ಇನ್ನು ಆಯ್ಕೆ ಪ್ರಕ್ರಿಯೆ ನಡೆದಿಲ್ಲ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷದ ನಾಯಕನ ಸ್ಥಾನವನ್ನು ಅಲಂಕರಿಸಬೇಕು ಎನ್ನುವ ವಾದವನ್ನು ವರಿಷ್ಠರ ಮುಂದಿಟ್ಟಿದ್ದಾರೆ. ಆದರೆ, ಬೊಮ್ಮಾಯಿ ಅವರು ಮೂಲ ಬಿಜೆಪಿಗರಲ್ಲ, ಬದಲಾಗಿ ಆರ್ ಎಸ್ ಎಸ್ ಹಿನ್ನೆಲೆಯಿಲ್ಲ. ಇದರಿಂದ ಅವರಿಗಿಂತ ಬಸವನಗೌಡ ಪಾಟೀಲ ಯತ್ನಾಳ್ ಹೆಸರನ್ನು ಪ್ರಹ್ಲಾದ್ ಜೋಶಿ ಹಾಗೂ ಸಂತೋಷ್ ಅವರು ಚಾಲ್ತಿಯಲ್ಲಿಟ್ಟಿದ್ದಾರೆ. ಅಂತಿಮವಾಗಿ ವರಿಷ್ಠರು ಯಾರ ಕಡೆ ವಲವು ತೋರಲಿದ್ದಾರೆ ಎನ್ನುವುದು ಕುತೂಹಲಕ್ಕೆಡೆ ಮಾಡಿದೆ.

ಇದಕ್ಕೆ ಬಿ ಎಸ್ ಯಡಿಯೂರಪ್ಪ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಯತ್ನಾಳ್ ಬದಲಾಗಿ ಬೇರೋಬ್ಬ ನಾಯಕನ ಆಯ್ಕೆಯಾಗಬೇಕು. ಒಕ್ಕಲಿಗ ಅಥವಾ ಲಿಂಗಾಯತರಿಗೆ ಈ ಸ್ಥಾನವನ್ನು ನೀಡಬೇಕೆಂಬ ನಿಲುವು ತಾಳಿದ್ದಾರೆ. ಒಟ್ಟಾರೆ ಮುಂಬರುವ ವಿಧಾನಸಭಾ ಅಧಿವೇಶನದೊಳಗೆ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಬಿಜೆಪಿ ತುಂಬಲಿ ಎನ್ನುವುದು ಅನೇಕರ ವಾದವಾಗಿದೆ. ಇದರ ನಡುವೆ ಶಾಸಕ ಅಶ್ವತ್ಥನಾರಾಯಣ ಮತ್ತು ಆರ್ ಅಶೋಕ್ ಈ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ತಮ್ಮದೇ ಆದ ಪ್ರಭಾವವನ್ನು ವರಿಷ್ಠರ ಮೇಲೆ ಬೀರುತ್ತಿದ್ದು, ಶಾತಾಯಗತಾಯ ಪ್ರತಿಪಕ್ಷದ ಸ್ಥಾನ ಪಡೆಯಲು ಶ್ರಮಿಸುತ್ತಿದ್ದಾರೆ.
ಪ್ರಬಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಸದನದ ಒಳಗೆ ಹಾಗೂ ಹೊರಗೆ ಸಮರ್ಥವಾಗಿ ಎದುರಿಸುವ ನಾಯಕನ ಕೊರತೆ ಬಿಜೆಪಿಯಲ್ಲಿದ್ದು, ಇದನ್ನು ತುಂಬಲು ಹೈಕಮಾಂಡ್ ಯಾವ ಸೂತ್ರ ಅನುಸರಿಸಲಿದೆ ಎನ್ನುವುದು ಮಾತ್ರ ನಿಗೂಢವಾಗಿದೆ.

ಇವೆಲ್ಲ ಬೆಳವಣಿಗೆ ನಡುವೆ ಸುನಿಲ್ ಕುಮಾರ್ ಮತ್ತು ಸುರೇಶ್ ಕುಮಾರ್ ಅವರ ಹೆಸರುಗಳು ಚಲಾವಣೆಯಲ್ಲಿದ್ದು, ಇವರಲ್ಲಿ ಬಹುತೇಕವಾಗಿ ಸುರೇಶ್ ಕುಮಾರ್ ಅವರ ಆಯ್ಕೆಗೆ ಅನೇಕರು ಒಲವು ತೋರಿದ್ದಾರೆ ಎನ್ನಲಾಗಿದೆ. ಸುರೇಶ್ ಕುಮಾರ್ ಅವರಿಗೆ ಒಂದು ಹಂತದಲ್ಲಿ ಯಡಿಯೂರಪ್ಪ ಅವರು ಬೆಂಬಲ ಸೂಚಿಸುವ ಸಾಧ್ಯತೆಗಳಿವೆ. ವಿಧಾನಪರಿಷತ್ ನಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಪಕ್ಷದ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಸಂಘಪರಿವಾರದ ಹಿನ್ನೆಲೆಯುಳ್ಳ ಸುರೇಶ್ ಕುಮಾರ್ ಅವರನ್ನು ಆಯ್ಕೆ ಮಾಡಿದರೆ ಯಡಿಯೂರಪ್ಪ ಅವರ ಕೈಮೇಲಾಗುತ್ತದೆ, ಸಂತೋಷ್ ಅವರನ್ನು ಮಣಿಸಿದಂತಾಗುತ್ತದೆ ಎಂಬ ಕಾರಣಕ್ಕೆ ಹೈಕಮಾಂಡ್ ಇನ್ನೂ ಯೋಚಿಸುತ್ತಿದೆ. ಮುಂಬರುವ ದಿನಗಳಲ್ಲಾದರೂ ಬಿಜೆಪಿಯಲ್ಲಿ ಕೇವಲ ಮಾತಿನ ನಾಯಕರುಗಳಿಗೆ ಮಣಿ ಹಾಕದೇ, ಸಮರ್ಥವಾಗಿ ಆಡಳಿತ ಪಕ್ಷವನ್ನು ಎದುರಿಸುವಂತಹ ನಾಯಕನ ಪ್ರತಿಪಕ್ಷದ ಸ್ಥಾನ ನೀಡಲಿ ಎನ್ನುವುದು ಬಿಜೆಪಿಯವರ ವಾದವಾಗಿದೆ.




