DCM DK Shivakumar: ಬೊಮ್ಮಾಯಿ ಅವರ ಧಮ್ಮು ತಾಕತ್ತಿಗೆ ಜನ ಈಗಾಗಲೇ ಉತ್ತರ ನೀಡಿದ್ದಾರೆ: ಡಿಸಿಎಂ

ಬೆಂಗಳೂರು : ನಾವು ರಾಜ್ಯದ ಜನರಿಗೆ ಐದು ಗ್ಯಾರಂಟಿ ನೀಡಿದ್ದು, ಅದರಲ್ಲಿ ಅನ್ನಭಾಗ್ಯ ಯೋಜನೆ ಮೂಲಕ 10 ಕೆ.ಜಿ ಅಕ್ಕಿ ನೀಡುವುದಾಗಿ ವಾಗ್ದಾನ ನೀಡಿದ್ದೇವೆ. ಹೆಚ್ಚುವರಿ 5 ಕೆ.ಜಿ ಅಕ್ಕಿ ಖರೀದಿಗೆ ಭಾರತೀಯ ಆಹಾರ ನಿಗಮ ಆರಂಭದಲ್ಲಿ ಒಪ್ಪಿಗೆ ನೀಡಿತ್ತು. ಆದರೆ ರಾಜಕೀಯ ಉದ್ದೇಶದಿಂದ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ವಿಫಲಗೊಳಿಸಲು ಇದೀಗ ಅಕ್ಕಿ ನೀಡಲು ನಿರಾಕರಿಸಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ,.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಡವರಿಗೆ ಬಿಜೆಪಿಯ ಕೇಂದ್ರ ಸರ್ಕಾರ ಮೋಸ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರದಿದ್ದರೆ ಕೇಂದ್ರದ ಯೋಜನೆ ಕಟ್ ಮಾಡುತ್ತೇವೆ ಎಂದು ನಡ್ದಾ ಅವರು ಹೇಳಿದ್ದರು. ಈಗ ಅವರು ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಅಕ್ಕಿ ನೀಡದಿದ್ದರೂ ನಾವು ಬೇರೆ ರಾಜ್ಯಗಳ ಜತೆ ಮಾತನಾಡಿ ಅಲ್ಲಿಂದ ಅಕ್ಕಿ ಖರೀದಿ ಮಾಡುತ್ತೇವೆ. ಸ್ವಲ್ಪ ತಡವಾದರೂ ನಾವು ನಮ್ಮ ಯೋಜನೆ ಜಾರಿ ಮಾಡಿಯೇ ಮಾಡುತ್ತೇವೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ದಮ್ಮು ತಾಕತ್ತಿನ ಬಗ್ಗೆ ಮಾತನಾಡಿದ್ದಾರೆ. ಅವರಂತೆ ನಾವು ಮಾತನಾಡಲ್ಲ, ರಾಜ್ಯದ ಜನರು ಅವರ ಧಮ್ಮು ತಾಕತ್ತಿಗೆ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.
ನಾವು ಈ ಯೋಜನೆಯಲ್ಲಿ ಕೇವಲ ಒಂದು ಪಕ್ಷದವರಿಗೆ ಮಾತ್ರ ಅಕ್ಕಿ ನೀಡುತ್ತಿಲ್ಲ. ಸರ್ವರಿಗೂ ಸಮಬಾಳು ಸಮಪಾಲು ಎಂಬಂತೆ ಪಕ್ಷ, ಧರ್ಮ ಭೇದವಿಲ್ಲದೆ ಎಲ್ಲರಿಗೂ ನೀಡುತ್ತಿದ್ದೇವೆ. ಒಂದು ವೇಳೆ ಕೇಂದ್ರ ಸರ್ಕಾರ ಸಹಕಾರ ನೀಡಿದ್ದರೆ ಜನರ ಹೊಟ್ಟೆ ತುಂಬುತ್ತಿತ್ತು. ಅಕ್ಕಿ ನೀಡುವುದು ನಮ್ಮ ಜವಾಬ್ದಾರಿ. ಪಾರದರ್ಶಕವಾಗಿ ಅಕ್ಕಿ ಖರೀದಿ ಮಾಡಿ ಜನರಿಗೆ ನೀಡುತ್ತೇವೆ.

More News