ಹೆಣ್ಣು ಮಕ್ಕಳು ಹುಟ್ಟಿದರೆ ಕುಟುಂಬಕ್ಕೆ ಹೊರೆ ಎಂಬ ಕಲ್ಪನೆಯಲ್ಲಿ ಇರುವ ಜನರ ಮಧ್ಯೆ ಹೆಣ್ಣು ಮಕ್ಕಳೇ ಮನೆಯ ಬೆಳಕು ಎನ್ನುವವರೂ ಇದ್ದಾರೆ. ಈ ಸಾಲಿಗೆ ಮೆಗಾಸ್ಟಾರ್ ಚಿರಂಜೀವಿ ಸೇರುತ್ತಾರೆ.
ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿವೆ. ಉದರದಲ್ಲಿ ಹೆಣ್ಣು ಎಂಬ ಸೂಚನೆ ದೊರೆಯ ಕೂಡಲೇ ಮೊಳಕೆಯಲ್ಲೇ ಚಿವುಟಲಾಗುತ್ತದೆ. ಹೆಣ್ಣು ಎಂಬ ಪದವೇ ಕೆಲವರಿಗೆ ಸಹಿಸಲಾಗುವುದಿಲ್ಲ.
ಆದರೆ ಬಹುಭಾಷಾ ನಟ ಚಿರಂಜೀವಿ ಕುಟುಂಬದಲ್ಲಿ ಹೆಣ್ಣು ಮಕ್ಕಳದ್ದೇ ಮೇಲುಗೈ. ಇದರೊಂದಿಗೆ ಇತ್ತೀಚೆಗೆ ರಾಮ್ ಚರಣ್ ಹಾಗು ಉಪಾಸನಾಗೆ ಹೆಣ್ಣು ಮಗು ಜನಿಸಿದ್ದು, ಮನೆಗೆ ಮತ್ತೊಬ್ಬ ಮಹಾಲಕ್ಷ್ಮಿ ಬಂದ ಖುಷಿ ಈ ಕುಟುಂಬದಲ್ಲಿ ಮನೆ ಮಾಡಿದೆ.
ಚಿರಂಜೀವಿ ಅವರ ಮಕ್ಕಳಿಗೆ ಹೆಣ್ಣು ಮಕ್ಕಳೇ ಜನಿಸಿದ್ದಾರೆ. ತಮ್ಮ ಮೊಮ್ಮಕ್ಕಳ ಕಂಡು ಚಿರಂಜೀವಿ ಸಹ ಖುಷಿಯಲ್ಲಿದ್ದಾರೆ. ಕುಟುಂಬದಲ್ಲಿ ಹೆಣ್ಣು ಜೀವಗಳ ಕಾರುಬಾರು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಲ್ಲದೆ ಇದೊಂದು ರೀತಿಯ ಪವಾಡ ಎಂತಲೂ ಅಭಿಮಾನಿಗಳು ಹೇಳುತ್ತಿದ್ದಾರೆ.
ಮದುವೆಯಾದ 11 ವರ್ಷಗಳ ಬಳಿಕ ರಾಮ್ ಚರಣ್ ಹಾಗೂ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕುಟುಂಬಕ್ಕೆ ಮತ್ತೊಬ್ಬ ಹೊಸ ಸದಸ್ಯರ ಆಗಮನ ಇಡೀ ಕುಟುಂಬಕ್ಕೆ ಸಂಭ್ರಮ ತಂದಿದೆ.
ಮೆಗಾಸ್ಟಾರ್ ಚಿರಂಜೀವಿ ಸಹ ಮನೆ ಹಾಗು ಮನ ಬೆಳಗುವ ಧನಲಕ್ಷ್ಮಿಯೊಂದಿಗೆ ಸಂಭ್ರಮಿಸುತ್ತಿದ್ದಾರೆ.
ಹಿರಿಯ ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಮೂವರು ಮಕ್ಕಳು. ಅವರ ಹಿರಿಯ ಮಗಳು ಸುಶ್ಮಿತಾಗೆ ಇಬ್ಬರು ಹೆಣ್ಣು ಮಕ್ಕಳು. ಕಿರಿಯ ಮಗಳು ಶ್ರೀಜಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈಗಾಗಲೇ ಚಿರಂಜೀವಿಗೆ ನಾಲ್ಕು ಮೊಮ್ಮಕ್ಕಳಿದ್ದಾರೆ. ಇದೀಗ ಐದನೇ ಮೊಮ್ಮಗಳ ಆಗಮನವಾಗಿದೆ. ಒಟ್ಟಿನಲ್ಲಿ ಒಬ್ಬ ಸ್ಟಾರ್ ನಟ ಹೆಣ್ಣು ಮಗುವಿನ ಆಗಮನವನ್ನು ತುಂಬು ಮನಸ್ಸಿನಿಂದ ಅಪ್ಪಿಕೊಂಡಿದ್ದಾರೆ. ಈ ನಡೆಯನ್ನು ಅವರ ಅಭಿಮಾನಿಗಳು ಸಹ ಪಾಲಿಸಬೇಕಿದೆ. ಹೆಣ್ಣು ಮಕ್ಕಳೂ ಗಂಡು ಮಗುವಿನಂತೆ ಸಮಾನಳು. ಅವಳಿಗೂ ಸ್ವತಂತ್ರವಾಗಿ ಬದುಕುವ ಹಕ್ಕಿದೆ ಎಂಬುದನ್ನು ಮನಗಾಣಬೇಕಿದೆ.




