N. Ravikumar: ಪೊಲೀಸ್ ಇಲಾಖೆ ಸರಕಾರದ ಕೈ ಗೊಂಬೆಯಾಗಿರುವುದು ಸರಿಯಲ್ಲ: ಎನ್.ರವಿಕುಮಾರ್

ಬೆಂಗಳೂರು: ರಾಜ್ಯದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ದೊಡ್ಡ ಪೋಸ್ಟರ್ ಹಿಡಿದು ಪೋಸ್ ಕೊಟ್ಟಿದ್ದಾರೆ. ಈಗ ಕೇಂದ್ರದ ವಿರುದ್ಧ ಪ್ರತಿಭಟನೆ ಯಾಕೆ ಎಂದು ಕೇಳಿದರು.
ಕೇಂದ್ರವು ಪ್ರತಿಯೊಬ್ಬರಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಕೊಡುತ್ತಿದೆ. 5 ಜನರಿದ್ದರೆ 25 ಕೆಜಿ ಲಭಿಸುತ್ತಿದೆ. ಕೋವಿಡ್ ಅವಧಿಯಲ್ಲಿ ಕೇಂದ್ರ ಸರಕಾರ ತಲಾ 10 ಕೆಜಿ ಕೊಡುತ್ತಿತ್ತು. ನರೇಂದ್ರ ಮೋದಿಯವರ ನೇತೃತ್ವದ ಅಂಥ ಕೇಂದ್ರ ಸರಕಾರದ ವಿರುದ್ಧ ಹೋರಾಟ ಮಾಡುವುದೆಂದರೆ ಅರ್ಥ ಏನು ಎಂದು ಪ್ರಶ್ನಿಸಿದರು.
ವಿದ್ಯುತ್ ದರವನ್ನು ತೀವ್ರವಾಗಿ ಹೆಚ್ಚಿಸಿದ್ದಾರೆ. ಲಕ್ಷಾಂತರ ರೂಪಾಯಿ ಕರೆಂಟ್ ಬಿಲ್ ಕಟ್ಟಬೇಕಿದೆ. ಸಣ್ಣ ಕೈಗಾರಿಕೆ, ಹೋಟೆಲ್‍ಗಳು, ಲಾಡ್ಜ್‍ನವರು ಬಿಲ್ ಪಾವತಿ ಮಾಡಲಾಗುತ್ತಿಲ್ಲ. ಜನಸಾಮಾನ್ಯರೂ ತತ್ತರಿಸಿ ಹೋಗಿದ್ದಾರೆ. ಹಿಂದಿನ ದರವನ್ನೇ ಮತ್ತೆ ಜಾರಿಗೊಳಿಸಿ ಎಂಬ ಬೇಡಿಕೆಯನ್ನೂ ಇಟ್ಟುಕೊಂಡು ನಾವು ಪ್ರತಿಭಟನೆ ಮಾಡಿದ್ದೇವೆ ಎಂದರು.
ನಮ್ಮನ್ನು ಅರೆಸ್ಟ್ ಮಾಡಿದ್ದಾರೆ. 10 ನಿಮಿಷ ಪ್ರತಿಭಟಿಸಲೂ ಅವಕಾಶ ಕೊಟ್ಟಿಲ್ಲ. ಪೊಲೀಸ್ ಇಲಾಖೆ ಸರಕಾರದ ಅಡಿಯಾಳಾಗಿ ಕೆಲಸ ಮಾಡುತ್ತಿದೆ. ಹೋರಾಟಕ್ಕೆ ಅವಕಾಶ ಇಲ್ಲ ಎಂದರೆ ಅರ್ಥ ಏನು? ಎಂದು ಪ್ರಶ್ನಿಸಿದರು. ಪೊಲೀಸ್ ಇಲಾಖೆ ಸರಕಾರದ ಕೈಗೊಂಬೆಯಾಗಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ತಲಾ 15 ಕೆಜಿ ಅಕ್ಕಿ ನೀಡಬೇಕು ಮತ್ತು ವಿದ್ಯುತ್ ದರವನ್ನು ಹಿಂದಿನ ಸ್ಥಿತಿಗೆ ತರಲು ಆಗ್ರಹಿಸಿ ಅಧಿವೇಶನದಲ್ಲೂ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಬಿಜೆಪಿ ಹೋರಾಟವನ್ನು ಹತ್ತಿಕ್ಕುವುದಾಗಿ ಸಿದ್ದರಾಮಯ್ಯರ ಸರಕಾರಕ್ಕೆ ಯೋಚನೆ ಇದ್ದರೆ ಅದು ಅವರ ಭ್ರಮೆ ಎಂದು ಅವರು ತಿಳಿಸಿದರು. ರಾಜ್ಯದ ಕಾಂಗ್ರೆಸ್ ಸರಕಾರವು ವರ್ಗಾವಣೆ ದಂಧೆಯಲ್ಲಿ ತೊಡಗಿರುವುದಂತೂ ನಿಜ. ಅದನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಕೇಂದ್ರವು 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದೆ. ಬಿಜೆಪಿ ಸರಕಾರ ಇರುವ ಬೇರೆ ರಾಜ್ಯಗಳಲ್ಲೂ 5 ಕೆಜಿ ಅಕ್ಕಿಯನ್ನಷ್ಟೇ ಕೊಡುತ್ತಿದ್ದೇವೆ. ಕರ್ನಾಟಕಕ್ಕೆ ಹೆಚ್ಚು ಅಕ್ಕಿ ಕೊಟ್ಟರೆ ಬೇರೆ ರಾಜ್ಯದವರು ಕೇಳುತ್ತಾರೆ. ಮಳೆ ಇನ್ನೂ ಬಂದಿಲ್ಲ. ಮುಂದಿನ ದಿನಗಳಲ್ಲಿ ಅಭಾವ ಆಗದಿರಲಿ ಎಂದು ಕೇಂದ್ರ ಸರಕಾರ ಈ ನಿಲುವನ್ನು ತೆಗೆದುಕೊಂಡಿದೆ. ಅದರ ವಿರುದ್ಧ ಹೋರಾಟಕ್ಕೆ ಕರೆಯನ್ನು ಖಂಡಿಸಿ ಪ್ರತಿಭಟನೆಗೆ ಇಳಿದಿದ್ದೇವೆ ಎಂದು ಸ್ಪಷ್ಟಪಸಿದರು.
ಕೇಂದ್ರದ ವಿರುದ್ಧ ಹೋರಾಟ ಮಾಡಲು ಸಿದ್ದರಾಮಯ್ಯರಿಗೆ ಮಾನ ಮರ್ಯಾದೆ ಇದೆಯೇ ಎಂದು ಪತ್ರಕರ್ತರ ಈ ಸಂಬಂಧಿತ ಪ್ರಶ್ನೆಗೆ ಉತ್ತರ ಕೊಟ್ಟರು. ಯಾವ ನೈತಿಕತೆ ಇಟ್ಟುಕೊಂಡು ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ? ಅವರು ಮಾನ ಮರ್ಯಾದೆ ಬಿಟ್ಟು ಮಾತನಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

More News