ಬೆಂಗಳೂರು : ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ ವೊಂದಕ್ಕೆ 5 ರೂಪಾಯಿ ಏರಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ನೂತನ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ.
ಕೆಎಂಎಫ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವಾರು ತಿಂಗಳುಗಳಿಂದ ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಏರಿಸಲು ಒತ್ತಾಯ ಮಾಡುತ್ತಿವೆ. ಆದ್ದರಿಂದ ಒಕ್ಕೂಟಗಳ ಬೇಡಿಕೆಗೆ ಈಡೇರಿಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಪ್ರಸ್ತುತ ಹಾಲಿನ ಉತ್ಪಾದನೆ ಹೆಚ್ಚಾಗುತ್ತಿದೆ. ರೈತರಿಗೆ ಖಾಸಗಿಯವರಿಗಿಂತ ಹೆಚ್ಚಿನ ದರ ನೀಡುವ ಉದ್ದೇಶದಿಂದ ಹಾಲಿನ ದರ ಏರಿಕೆ ಅನಿವಾರ್ಯ ಎಂದು ನೂತನ ಅಧ್ಯಕ್ಷರು ತಿಳಿಸಿದರು.
ಪ್ರತಿ ದಿನ ರಾಜ್ಯದಲ್ಲಿ ಸುಮಾರು 87 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಲೀಟರ್ ವೊಂದಕ್ಕೆ ಖರೀದಿ ದರ 33 ರೂಪಾಯಿಯಾಗಿದೆ. ಖಾಸಗಿ ಹಾಗೂ ನೆರೆ ರಾಜ್ಯಗಳ ಹಾಲು ಮತ್ತು ಹಾಲು ಉತ್ಪನ್ನಗಳ ಬೆಲೆಗೆ ಹೋಲಿಸಿದ್ದಲ್ಲಿ ನಂದಿನಿ ಹಾಲು ಮತ್ತು ಉತ್ಪನ್ನಗಳ ಬೆಲೆ ತುಂಬಾ ಕಡಿಮೆ ಇದೆ. ಆದ್ದರಿಂದ ಬೆಲೆ ಏರಿಕೆ ಅನಿವಾರ್ಯ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ತಿಳಿಸಿದರು.

ಬಜೆಟ್ ಅಧಿವೇಶನದ ಬಳಿಕ ಹಾಲಿನ ದರ ಏರಿಕೆ ಕುರಿತು ಮುಖ್ಯಮಂತ್ರಿ ಅವರಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ ಸಹಕಾರ ಸಚಿವ, ಕೇವಲ ಮಾರಾಟ ದರ ಮಾತ್ರವಲ್ಲದೆ ಖರೀದಿ ದರವನ್ನು ಏರಿಕೆ ಮಾಡಲಾಗುವುದು, ಹಾಗೆಯೇ ಶೇಕಡಾ 90ರಷ್ಟು ಲಾಭಾಂಶವನ್ನು ರೈತರಿಗೆ ವರ್ಗಾಯಿಸಲಾಗುವುದು ಎಂದು ಅವರು ತಿಳಿಸಿದರು.