ಅತಿಥೇಯ ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದ ನಾಯಕ ಪ್ಯಾಟ್ ಕಮ್ಮಿನ್ಸ್, ಟೀಂ ಇಂಡಿಯಾದ ರವಿಚಂದ್ರನ್ ಅಶ್ವಿನ್ ಅವರ ದಾಖಲೆ ಮುರಿದಿದ್ದಾರೆ.
ಬರ್ಮಿಂಗ್ಹ್ಯಾಮ್‌ನ ಎಡ್ಜ್ ಬಾಸ್ಟನ್ ನಲ್ಲಿ ಇತ್ತೀಚಿಗೆ ನಡೆದ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಪ್ಯಾಟ್ ಕಮ್ಮಿನ್ಸ್, ಆಸೀಸ್ ತಂಡಕ್ಕೆ 2 ವಿಕೆಟ್‌ಗಳ ರೋಚಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಜವಾಬ್ದಾರಿಯುತ ಆಟವಾಡಿದ ಕಮ್ಮಿನ್ಸ್, ಅಜೇಯ 44 ರನ್‌ಗಳಿಸಿ ತಂಡವನ್ನ ಗೆಲುವಿನ ದಡಸೇರಿಸಿದ್ದರು. ಅಲ್ಲದೇ 9ನೇ ಕ್ರಮಾಂಕದಲ್ಲಿ ನೇಥನ್ ಲಯನ್ ಜೊತೆಗೂಡಿ ಅಜೇಯ 55 ರನ್‌ಗಳ ಜೊತೆಯಾಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಗೆಲುವಿನೊಂದಿಗೆ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಹ ಪಡೆಯಿತು. ತಮ್ಮ ಈ ಇನ್ನಿಂಗ್ಸ್‌ನ ಮೂಲಕ ಪ್ಯಾಟ್ ಕಮ್ಮಿನ್ಸ್, ಭಾರತದ ಆರ್. ಅಶ್ವಿನ್ ಅವರ ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ. ಆಸೀಸ್ ಪರ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಮ್ಮಿನ್ಸ್, ಚೇಸಿಂಗ್ ನಲ್ಲಿ 9ನೇ ಹಾಗೂ ಅದಕ್ಕಿಂತಲೂ ಕೆಳ ಕ್ರಮಾಂಕದಲ್ಲಿ ಅತ್ಯಧಿಕ ರನ್‌ಗಳಿಸಿದ ಬ್ಯಾಟರ್ ಎನಿಸಿದ್ದಾರೆ. ಈ ಹಿಂದೆ 2022ರಲ್ಲಿ ಆರ್. ಅಶ್ವಿನ್, ಬಾಂಗ್ಲಾದೇಶದ ವಿರುದ್ಧ ಅಜೇಯ 42 ರನ್‌ಗಳಿಸಿದ್ದು ದಾಖಲೆಯಾಗಿತ್ತು.

ಆದರೆ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅಜೇಯ 44 ರನ್‌ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ಪ್ಯಾಟ್ ಕಮ್ಮಿನ್ಸ್, ಭಾರತದ ಕೇರಂ ಬಾಲ್ ಸ್ಪೆಷಲಿಸ್ಟ್ ಆರ್. ಅಶ್ವಿನ್ ಹೆಸರಿನಲ್ಲಿದ್ದ ದಾಖಲೆಯನ್ನ ಬ್ರೇಕ್ ಮಾಡಿ, ಹೊಸ ದಾಖಲೆ ಬರೆದಿದ್ದಾರೆ. ಇನ್ನೂ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ಕೂಡ ಮಿಂಚಿದ್ದ ಪ್ಯಾಟ್ ಕಮ್ಮಿನ್ಸ್, ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಸಹ ಪಡೆದಿದ್ದರು.