ಹುಬ್ಬಳ್ಳಿ; ಅವರೆಲ್ಲರೂ ವೃದ್ಧಾಪ್ಯ ವೇತನ, ಮಾಸಾಶನದ ಸಹಾಯವನ್ನು ನಂಬಿಕೊಂಡು ಜೀವನ ನಡೆಸುವವರು. ಆದರೆ ರಾಜ್ಯ ಸರ್ಕಾರ ಐದು ಗ್ಯಾರಂಟಿ ಜಾರಿಗೊಳಿಸುವ ಗದ್ದಲದಲ್ಲಿ ಸಾಮಾಜಿಕ ಭದ್ರತೆಯ ಯೋಜನೆಗಳ ಫಲಾನುಭವಿಗಳು ಸಂಕಷ್ಟದಲ್ಲಿದ್ದಾರೆ. ರಾಜ್ಯದ ಬಡ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸಾಮಾಜಿಕ ಭದ್ರತೆ ಯೋಜನೆ ಅಡಿ ಸರ್ಕಾರ ವಿವಿಧ ಮಾಸಾಶನಗಳನ್ನು ನೀಡುತ್ತಿದೆ. ಇದೀಗ ಆ ಮಾಸಾಶನಕ್ಕೆ ಅನುದಾನದ ಕೊರತೆ ಎದುರಾಗಿ ಫಲಾನುಭವಿಗಳು ಕಷ್ಟ ಎದುರಿಸುವಂತಾಗಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ..
ಸರದಿ ಸಾಲಿನಲ್ಲಿ ನಿಂತಿರುವ ಮಹಿಳೆಯರು, ನಿಲ್ಲುವ ಶಕ್ತಿ ಇಲ್ಲದಿದ್ದರೂ ಜೀವನ ನಡೆಸುವುದಕ್ಕಾಗಿಯೇ ಸರದಿಯಲ್ಲಿ ನಿಂತಿರುವ ವಯೋ ವೃದ್ಧರು. ಈ ಎಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ಮಿನಿ ವಿಧಾನ ಸೌಧ. ಹೌದು.. ಸಾಮಾಜಿಕ ಭದ್ರತೆ ಯೋಜನೆ ಅಡಿ ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ, ಅಂಗವಿಕಲ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹೀಗೆ ವಿವಿಧ ಮಾಸಾಶನಗಳನ್ನು ನೀಡಲಾಗುತ್ತಿದೆ. ಆದರೆ ಸುಮಾರು 3 ತಿಂಗಳಿಂದ ಫಲಾನುಭವಿಗಳ ಖಾತೆಗೆ ಮಾಸಾಶನ ಜಮೆ ಮಾಡಲು ಅನುದಾನ ಕೊರತೆ ಎದುರಾಗಿದೆ. ಹೀಗಾಗಿ ಫಲಾನುಭವಿಗಳು ನಿತ್ಯ ತಹಶಿಲ್ದಾರರ ಕಚೇರಿ, ಬ್ಯಾಂಕ್‌ಗಳಿಗೆ ಓಡಾಟ ನಡೆಸುವಂತಾಗಿದೆ. ಫೆಬ್ರವರಿ ವರೆಗೆ ಪಿಂಚಣಿಗಳು ಜಮೆ ಆಗಿವೆ. ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಪಿಂಚಣಿಗಳಿಗೆ ಗ್ರಹಣ ಹಿಡಿದಂತಾಗಿದೆ. ಮಾರ್ಚ್‌ನಿಂದ ಈವರೆಗೆ ಪಿಂಚಣಿ ಜಮೆಯಾಗದ ಕಾರಣ ಬಹುತೇಕ ಫಲಾನುಭವಿಗಳು ಆತಂಕ್ಕೀಡಾಗಿದ್ದಾರೆ.

ಇನ್ನೂ ತಮ್ಮನ್ನು ಯೋಜನೆಯಿಂದ ಕೈ ಬಿಡಲಾಗಿದೆ ಎಂಬ ಚಿಂತೆಯಲ್ಲಿ ತೊಡಗಿ ನಿತ್ಯವೂ ತಹಶೀಲ್ದಾರರ ಕಚೇರಿಗೆ ಆಗಮಿಸಿ ಖಾತೆ ಮಾಹಿತಿ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬಹುತೇಕ ಯೋಜನೆಗಳಲ್ಲಿ ಖೊಟ್ಟಿ ದಾಖಲೆ ನೀಡಿ ಲಾಭ ಪಡೆದವರೂ ಸಾಕಷ್ಟು ಜನರಿದ್ದಾರೆ. ಅಂತಹವರಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ ಪಿಂಚಣಿ ಹಣವನ್ನೇ ನಂಬಿ ಜೀವನ ಸಾಗಿಸುತ್ತಿರುವ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಚುನಾವಣೆ ಮುಗಿದು ಸರ್ಕಾರ ರಚನೆಯಾಗಿದೆ. ಸಂಬಂಧಿಸಿದವರು ಸರ್ಕಾರಕ್ಕೆ ಪತ್ರ ಬರೆದು ಮಾಸಾಶನ ಮಂಜೂರಿಗೆ ಮನವಿ ಮಾಡಬೇಕಿತ್ತು. ಆದರೆ ಆ ಕೆಲಸವಾಗಿಲ್ಲ.
ಜನರ ಕಷ್ಟ ಪರಿಹರಿಸಲು ಸದಾ ಸಿದ್ಧ ಎನ್ನುವ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಶೀಘ್ರ ಮಾಸಾಶನ ಮಂಜೂರು ಮಾಡಿಸುವರೇ? ಎಂಬುದನ್ನು ಕಾದು ನೋಡಬೇಕಿದೆ.

ಒಟ್ಟಿನಲ್ಲಿ ತಿಂಗಳಿಗೆ ಸರ್ಕಾರದಿಂದ ಆರು ಕಾಸು ಮೂರು ಕಾಸಿನಿಂದ ಬದುಕು ಕಟ್ಟಿಕೊಂಡವರು ಈಗ ಭವಣೆ ಅನುಭವಿಸುವಂತಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಗಳನ್ನು ಜರುಗಿಸಿ ಕೂಡಲೇ ಮಾಸಾಶನ ಬಿಡುಗಡೆ ಮಾಡುವ ಕಾರ್ಯವನ್ನು ಮಾಡಬೇಕಿದೆ.