ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರ ಗ್ಯಾರಂಟಿಗಳ ಅನುಷ್ಠಾನ ಮಾಡದೆ ಇದ್ದಲ್ಲಿ ಭರವಸೆ ಸದನದ ಒಳಗೆ ಮತ್ತು ಹೊರಗೆ ತೀವ್ರ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಎಚ್ಚರಿಸಿದರು.
ದಾವಣಗೆರೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೇಂದ್ರದವರು ಅಕ್ಕಿ ಕೊಡುವುದಾಗಿ ಹೇಳಿರಲಿಲ್ಲ. ಇದು ಜನರಿಗೆ ಮಾಡುವ ದ್ರೋಹ. ಇದನ್ನು ಖಂಡಿಸುವೆ. ಕಾಂಗ್ರೆಸ್ ತನ್ನ ಸುಳ್ಳು ಭರವಸೆಯಿಂದ ಇಷ್ಟು ಸೀಟು ಗೆದ್ದಿದೆ ಎಂದು ತಿಳಿಸಿದರು. ಭರವಸೆ ಈಡೇರಿಸಲು ಯೋಗ್ಯತೆ ಇರದಿದ್ದರೆ ಅಧಿಕಾರ ಬಿಟ್ಟು ತೊಲಗಬೇಕು ಎಂದು ಅವರು ಆಗ್ರಹಿಸಿದರು.
ಉದ್ದೇಶಪೂರ್ವಕವಾಗಿ ಅಕ್ಕಿಗೆ ಸಂಬಂಧಿಸಿ ಕೇಂದ್ರ ಸರಕಾರದ ಕಡೆ ಬೆರಳು ತೋರಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಈಗಾಗಲೇ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಎಲ್ಲರಿಗೂ ನೀಡುತ್ತಿದೆ. ಹೆಚ್ಚುವರಿ ಅಕ್ಕಿ ಕೊಡಬೇಕಿದ್ದರೆ ರಾಜ್ಯ ಸರಕಾರ ಖರೀದಿಸಿ ವಿತರಣೆ ಮಾಡಲಿ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿ ಕೊಟ್ಟಿದ್ದು, ಮಹಿಳೆಯರಿಗೆ ಉಚಿತ ಬಸ್ ಎಂಬುದು ಜಾರಿಯಲ್ಲಿದೆ. ಅದಕ್ಕೂ ಕೆಲವು ಅಡ್ಡಿ ಆತಂಕಗಳಿವೆ. ಉಳಿದ 4 ಗ್ಯಾರಂಟಿಗಳನ್ನು ವಿಧಾನಮಂಡಲ ಅಧಿವೇಶನಕ್ಕೆ ಮೊದಲು ಕಾರ್ಯರೂಪಕ್ಕೆ ತರದೆ ಇದ್ದರೆ ಸದನದ ಒಳಗೆ ಮತ್ತು ಹೊರಗಡೆ ಸತ್ಯಾಗ್ರಹ ಮಾಡಲಿದ್ದೇವೆ ಎಂದು ಎಚ್ಚರಿಸಿದರು.

ನಾನು ಸಹ ಕಾಂಗ್ರೆಸ್ ಸರಕಾರದ ವಿರುದ್ಧ ವಿಧಾನಸೌಧದ ಮುಂದೆ ಧರಣಿ ಕುಳಿತುಕೊಳ್ಳಲು ಸಿದ್ಧನಿದ್ದೇನೆ. ತಕ್ಷಣ ಅವರು ಕೊಟ್ಟ 5 ಭರವಸೆಗಳನ್ನು ಈಡೇರಿಸಲಿ ಎಂದು ಆಗ್ರಹಿಸಿದರು. ವಿನಾಕಾರಣ ಕೇಂದ್ರದ ಕಡೆ ತೋರಿಸುವುದನ್ನು ಕೈಬಿಡಲಿ ಎಂದು ಒತ್ತಾಯಿಸಿದರು.
ಹೋರಾಟದ ರೂಪುರೇಷೆ ಬಗ್ಗೆ ನಮ್ಮ ಸಂಸದರು, ಶಾಶಕರು, ಮೇಲ್ಮನೆ ಸದಸ್ಯರು ಚರ್ಚಿಸಿ ನಿರ್ಧಾರ ಮಾಡಲಿದ್ದಾರೆ. ಎಲ್ಲರೂ ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಗ್ಯಾರಂಟಿ ಅನುಷ್ಠಾನದಿಂದ ಅಭಿವೃದ್ಧಿ ಕಾರ್ಯಕ್ಕೆ ಹಣ ಉಳಿಯುವುದಿಲ್ಲ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟರು.
ರಾಜ್ಯ ಸರಕಾರಕ್ಕೆ ಈಗಾಗಲೇ ಜನತೆ ಛೀಮಾರಿ ಹಾಕುತ್ತಿದ್ದಾರೆ. ವಿದ್ಯುತ್ ದರ ಏರಿಕೆಯನ್ನು ಆಕ್ಷೇಪಿಸಿ ಕೈಗಾರಿಕೋದ್ಯಮಿಗಳು ಇವತ್ತು ಬಂದ್ ಮಾಡಿದ್ದಾರೆ ಎಂದು ತಿಳಿಸಿದರು. ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಮೋಜು ಮಾಡುವ ಸರಕಾರದ ರೀತಿಯನ್ನು ಖಂಡಿಸುವುದಾಗಿ ತಿಳಿಸಿದರು.