ಬೆಂಗಳೂರು : ವಿಧಾನ ಪರಿಷತ್ ನ 3 ಸ್ಥಾನಗಳಿಗೆ ನಡೆಯಲಿರುವ ನಾಮನಿರ್ದೇಶನ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಣಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಮೂರು ಸ್ಥಾನಗಳಲ್ಲಿ ಎರಡು ಸ್ಥಾನಗಳನ್ನು ಅವರವರ ಬೆಂಬಲಿಗರಿಗೆ ನೀಡುವಲ್ಲಿ ಯಶಸ್ವಿಯಾಗಿರುವ ಎರಡೂ ಬಣ, ಮೂರನೇ ಅಭ್ಯರ್ಥಿಗಾಗಿ ತೀವ್ರ ಪೈಪೋಟಿ ನಡೆಸುತ್ತಿವೆ. ಎಂ.ಆರ್.ಸೀತಾರಾಮ್, ಮನ್ಸೂರ್ ಆಲಿ ಖಾನ್ ಗೆ ಈ ಇಬ್ಬರಿಗೆ ಎಂ ಎಲ್ ಸಿ ಸ್ಥಾನ ನೀಡಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ಉಳಿದ ಒಂದು ಸ್ಥಾನಕ್ಕೆ ಎರಡೂ ಬಣದಿಂದ ಸಾಕಷ್ಟು ಆಕಾಂಕ್ಷಿತರಿದ್ದು, ಯಾರಿಗೆ ಒಲಿಯಲಿದೆ ಎನ್ನುವುದು ಕುತೂಹಲಕ್ಕೆಡೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಬಣದ ಎಂಆರ್ ಸೀತಾರಾಂ ನಾಮನಿರ್ದೇಶನಕ್ಕೆ ಯಾವುದೇ ತೊಂದರೆಯಿಲ್ಲ, ಅದೇ ರೀತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಬಣದಿಂದ ಮನ್ಸೂರ್ ಆಲಿ ಖಾನ್ ನಾಮನಿರ್ದೇಶನಕ್ಕೆ ಅಸ್ತು ನೀಡಲಾಗಿದೆ. ಮೂರನೆ ಸ್ಥಾನಕ್ಕೆ ಡಿಕೆ ಶಿವಕುಮಾರ್ ಬೆಂಬಲಿತ ಮಾಜಿ ಐಆರ್ ಎಸ್ ಅಧಿಕಾರಿ ಸುಧಾಮದಾಸ್ ಅವರಿಗೆ ನೀಡಲು ಡಿಕೆಶಿ ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಡಿಕೆಶಿ ಪಟ್ಟಿಗೆ ಒಪ್ಪದ ಸಿದ್ದರಾಮಯ್ಯ, ನಟ, ಸಂಗೀತ ನಿರ್ದೇಶಕ ಸಾಧುಕೋಕಿಲಾ ಅಥವಾ ನಟಿ ಉಮಾಶ್ರೀ ಇಬ್ಬರಲ್ಲಿ ಒಬ್ಬರಿಗೆ ನೀಡಲು ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರ ನಡುವೆ ಎಂಎಲ್ ಸಿ ರೇಸ್ ನಲ್ಲಿ ಕೆಪಿಸಿಸಿ ವಕ್ತಾರರಾದ ನಟರಾಜ್ ಗೌಡ ಮತ್ತು ಅನಿಲ್ ಕುಮಾರ್ ಎಂಟ್ರಿ ನೀಡಿದ್ದಾರೆ. ಹಾಗೆಯೇ ಡಿಕೆ ಶಿವಕುಮಾರ್ ಬಣದಿಂದ ರಘುನಂದನ್ ರಾಮಣ್ಣ,ಮಾಜಿ ರಾಜ್ಯ ಸಭಾ ಸದಸ್ಯ ರಾಜೀವ್ ಗೌಡ ಕೂಡ ಆಕಾಂಕ್ಷಿಗಳಾಗಿ ರೇಸ್ ಗೆ ಎಂಟ್ರಿಯಾಗಿದ್ದಾರೆ. ಹಿರಿತನ, ಸೇವೆ, ಚುನಾವಣೆ ವೇಳೆ ಶ್ರಮಿಸಿದ ಅಧಾರದ ಮೇಲೆ ಎಂ ಎಲ್ ಸಿ ಅವರನ್ನು ಆಯ್ಕೆ ಮಾಡಲು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮೂವರು ಅಭ್ಯರ್ಥಿಗಳು ಅವಿರೋಧ ಆಯ್ಕೆ ವಿಧಾನ ಸಭೆಯಿಂದ ವಿಧಾನ ಪರಿಷತ್ ನಡೆಯಲಿರುವ ಮೂರು ಸ್ಥಾನಗಳ ಚುನಾವಣೆಗೆ ಈಗಾಗಲೇ ಚುನಾವಣೆ ಕಣದಲ್ಲಿರುವ ಮೂವರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಲಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆ ಬಳಿಕ ಈ ಸಂಬಂಧ ಅಧಿಕೃತ ಘೋಷಣೆ ಚುನಾವಣಾಧಿಕಾರಿ ಎಂ.ಕೆ ವಿಶಾಲಾಕ್ಷಿ ಮಾಡಲಿದ್ದಾರೆ. ನಾಮಪತ್ರಗಳು ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿರುವ ಹಿನ್ನಲೆಯಲ್ಲಿ ಮೂವರೇ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಣದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಎನ್. ಎಸ್ ಬೋಸರಾಜ್, ತಿಪ್ಪಣ್ಣಪ್ಪ ಕಮಕನೂರು ಉಳಿದಿದ್ದಾರೆ. ಇಂದು ಮೂವರು ಅಭ್ಯರ್ಥಿಗಳು ಚುನಾವಣಾಧಿಯಿಂದ ಪ್ರಮಾಣ ಪತ್ರ ಪಡೆಯಲಿದ್ದಾರೆ.




