ಕಳೆದ ಹಲವು ವರ್ಷಗಳಿಂದ ಐಸಿಸಿ ಟ್ರೋಫಿ ಗೆಲುವಿನ ಹುಡುಕಾಟದಲ್ಲಿರುವ ಟೀಂ ಇಂಡಿಯಾ ಕೊನೆಯ ಐಸಿಸಿ ಪ್ರಶಸ್ತಿ ಗೆದ್ದು ಇಂದಿಗೆ ಹತ್ತು ವರ್ಷಗಳು ಕಳೆದಿದೆ.
2013ರಲ್ಲಿ ಆಂಗ್ಲರ ನಾಡಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಪ್ರಶಸ್ತಿ ಗೆದ್ದುಬೀಗಿತ್ತು. ಭಾರತ ತಂಡದ ಯಶಸ್ವಿ ಕ್ಯಾಪ್ಟನ್ ಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಇದು ಭಾರತ ತಂಡ ಗೆದ್ದ ಎರಡನೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯಾಗಿದೆ.
ಸಂಘಟಿತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡವನ್ನ ಮಣಿಸಿದ ಭಾರತ, ಆ ಮೂಲಕ ಆಸ್ಟ್ರೇಲಿಯಾ ತಂಡದ ಬಳಿಕ ಒಂದಕ್ಕಿಂತ ಹೆಚ್ಚು ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಎರಡನೇ ತಂಡ ಎಂಬ ಹೆಗ್ಗಳಿಕೆ ಸಹ ಟೀಂ ಇಂಡಿಯಾ ತನ್ನದಾಗಿಸಿಕೊಂಡಿತು. ಅಲ್ಲದೇ ಪುರುಷರ ಕ್ರಿಕೆಟ್‌ನಲ್ಲಿ ಮೂರು ಮಾದರಿಯ ಐಸಿಸಿ ಪಂದ್ಯಾವಳಿಗಳಲ್ಲಿ ಪ್ರಶಸ್ತಿ ಗೆದ್ದ ಮೊದಲ ಕ್ಯಾಪ್ಟನ್ ಎಂಬ ಹಿರಿಮೆಗೂ ಮಹೇಂದ್ರ ಸಿಂಗ್ ಧೋನಿ ಭಾಜನರಾಗಿದ್ದರು. ಇದಕ್ಕೂ ಮುನ್ನ ಭಾರತ ತಂಡ ಎಂ.ಎಸ್.ಧೋನಿ ಸಾರಥ್ಯದಲ್ಲಿ 2007ರಲ್ಲಿ ಐಸಿಸಿ ಟಿ20 ವಿಶ್ವಕಪ್, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಗೆದ್ದುಬೀಗಿತ್ತು.

ಆದರೆ 2013ರ ನಂತರದಲ್ಲಿ ಟೀಂ ಇಂಡಿಯಾ, ಯಾವುದೇ ಐಸಿಸಿ ಪಂದ್ಯಾವಳಿಗಳಲ್ಲೂ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿ ಕಂಡಿಲ್ಲ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಬಳಿಕ ಭಾರತ ತಂಡ, ಏಕದಿನ, ಟಿ20 ವಿಶ್ವಕಪ್ ಟೂರ್ನಿಗಳ ಜೊತೆಗೆ ಕಳೆದ ಎರಡು ಆವೃತ್ತಿಗಳಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪ್ರವೇಶಿಸಿದರು, ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ
ಇದು ಟೀಂ ಇಂಡಿಯಾ ಆಟಗಾರರು ಸೇರಿದಂತೆ ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ನಾಯಕತ್ವದಲ್ಲೂ ಬದಲಾವಣೆ ಕಂಡಿರುವ ಭಾರತ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರುಗಳ ನೇತೃತ್ವದಲ್ಲಿ ಕೂಡ ಐಸಿಸಿ ಪಂದ್ಯಾವಳಿಯಲ್ಲಿ ಪಾಲ್ಗೊಂಡರು ಪ್ರಶಸ್ತಿ ಗೆಲ್ಲುವ ಕನಸು ಮಾತ್ರ ಇನ್ನೂ ನನಸಾಗಿಲ್ಲ. ಆದರೆ ಕಳೆದ ಹತ್ತು ವರ್ಷಗಳ ನಿರಂತರ ಪ್ರಯತ್ನದಲ್ಲಿ ಸಕ್ಸಸ್ ಕಾಣದ ಭಾರತೀಯ ಆಟಗಾರರು, ಈ ವರ್ಷದ ಅಂತ್ಯದಲ್ಲಿ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಹತ್ತು ವರ್ಷಗಳ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಭರವಸೆ ಹೊಂದಿದೆ.




