Operation Kamala: ಆಪರೇಶನ್ ಕಮಲವೇ ಬಿಜೆಪಿ ಸೋಲಿಗೆ ಮುಳುವಾಯ್ತು: ಈಶ್ವರಪ್ಪ ಗರಂ

ಬಿಜೆಪಿಯಲ್ಲಿ ಸ್ವಲ್ಪ ಮಟ್ಟಿಗೆ ಶಿಸ್ತು ಕಡಿಮೆ ಆಗಿದೆ.‌ ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಂದಿದೆ. ಕಾಂಗ್ರೆಸ್ ನಾಯಕರನ್ನು ಕರೆದುಕೊಂಡು ಬಂದಿದ್ದಕ್ಕೆ ನಾವು ಅನುಭವಿಸ್ತೀದ್ದೀವಿ ಎಂದು ಪರೋಕ್ಷವಾಗಿ ಆಪರೇಶನ್ ಕಮಲದ ವಿರುದ್ದ ಮಾಜಿ ಸಚಿವ ಈಶ್ವರಪ್ಪ ಗರಂ ಆದರು.

ಹುಬ್ಬಳ್ಳಿ ಯಲ್ಲಿ ಪರೋಕ್ಷವಾಗಿ ಆಪರೇಶನ್ ಕಮಲದ ವಿರುದ್ದ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬಂದ ಮೇಲೆ ಅಲ್ಪ ಸ್ವಲ್ಪ ಶಿಸ್ತು ಹೋಗಿದೆ. ಮುಂದೆ ಅಶಿಸ್ತು ತೋರಿಸುವವರ ಬಾಲ ಕಟ್ ಮಾಡ್ತೇವೆ ಎಂದಿದ್ದು, ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಸೂಚನೆ ನೀಡಿದರು.

“ದೇಶದ್ರೋಹಿಗಳ ಮೇಲಿನ ಕೇಸ್ ಹಿಂಪಡೆಯಲು ಆಗುತ್ತೆ, ವಿದ್ಯುತ್ ದರ ಏರಿಕೆ ಹಿಂಪಡೆಯಲು ಆಗಲ್ವಾ?”

ಮುಂದುವರೆದು ಕರೆಂಟ್ ದರ ಏರಿಕೆ ಕುರಿತು ಮಾತನಾಡಿದ ಅವರು, ದೇಶದ್ರೋಹಿಗಳ ಮೇಲಿನ ಕೇಸ್ ಹಿಂಪಡೆಯಲು ಆಗುತ್ತೆ, ವಿದ್ಯುತ್ ದರ ಏರಿಕೆ ಹಿಂಪಡೆಯಲು ಆಗಲ್ವಾ? ಎಂದು ಪ್ರಶ್ನೆ ಹಾಕಿದರು.
ವಿದ್ಯುತ್ ದರ ಏರಿಕೆಗೆ ಬಿಜೆಪಿ ಸರ್ಕಾರ ಅಪ್ರೂವಲ್ ಕೊಟ್ಟಿಲ್ಲ. ಕಾಂಗ್ರೆಸ್‌ ಸರ್ಕಾರ ಕ್ಯಾಬಿನೆಟ್ ಅಪ್ರೂವಲ್ ಮಾಡಿದೆ. ಹೀಗಾಗಿ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಕೂಡಲೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕಳೆದ ಚುನಾವಣೆ ಕೆಟ್ಟ ಕನಸು ಅಂತ ಮರೆತಿದ್ದೇವೆ. ರಾಜ್ಯ ಮತ್ತು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಏರಲು ಜನರ ಬಳಿ ಹೊರಟಿದ್ದೇವೆ. ರಾಜ್ಯಾದ್ಯಂತ ಓಡಾಡಿ ಪಕ್ಷವನ್ನು ಬಲಿಷ್ಠ ಮಾಡುತ್ತಿದ್ದೇವೆ. ಹತ್ತು ಕೆಜಿ ಅಕ್ಕಿ ಕೊಡೋಕೆ ಕೇಂದ್ರವನ್ನು ಮೊದಲು ಕೇಳಿದ್ರಾ? ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬರೀ ಸುಳ್ಳು ಹೇಳ್ತಾರೆ. ಅವರು ಹೇಳಿದ್ದನ್ನು ರಾಮಲಿಂಗಾರೆಡ್ಡಿ ರಿಪೀಟ್ ಮಾಡ್ತಾರೆ. ಇದೆಲ್ಲಾ ಜನಗಳ ಮುಂದೆ ಹೋಗೋಣ, ಜನರೇ ತೀರ್ಮಾನ ಮಾಡ್ತಾರೆ
ಮೊದಲ ಕ್ಯಾಬಿನೆಟ್‌ನಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಹೇಳಿದ್ರು. ಕಾಂಗ್ರೆಸ್‌ನವರು ಸುಳ್ಳುಹೇಳಿ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ರಾಜ್ಯದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿರುದ್ಯೋಗಿ ಯುವಕರಿಗೆ ಮೋಸ ಮಾಡಿದ್ದು, ಒಬ್ಬರಿಗೂ ಒಂದು ರೂಪಾಯಿಯೂ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಕೊಡುವ ಐದು ಕೆಜಿ ಉಚಿತ ಅಕ್ಕಿಯ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ. ಬಡ ಜನರಿಗೆ ಟೋಪಿ ಹಾಕಿ ಸರ್ಕಾರ ನಡೆಸುತ್ತಿದ್ದಾರೆ ಎಂದರು.

ಮುಂದುವರೆದು ಗ್ಯಾರೆಂಟಿ ಬಗ್ಗೆ ಗುಡುಗಿದ ಅವರು, ಎಷ್ಟು ದುಡ್ಡು ಬೇಕು ಲೆಕ್ಕ ಹಾಕಿಲ್ಲ, ಎಲ್ಲಿಂದ ದುಡ್ಡು ತರ್ತಾರೆ ಗೊತ್ತಿಲ್ಲ. ಎಲ್ಲಾ ಗ್ಯಾರಂಟಿಗಳಿಗೆ ಎಷ್ಟು ಹಣ ಬೇಕು, ಎಲ್ಲಿಂದ ತರ್ತೀರಿ ಅಂತ ಸಿಎಮ್ ಹೇಳಬೇಕು. ಸತೀಶ್ ಜಾರಕಿಹೋಳಿ ತಮ್ಮದು ರಾಜಕೀಯ ಹೇಳಿಕೆ ಅಂತ ನಾಚಿಕೆಗೇಡಿತನದಿಂದ ಮಾತನಾಡಿದ್ದಾರೆ. ಗ್ಯಾರಂಟಿ ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿ ಹೋರಾಟ ಆರಂಭಿಸುತ್ತೇವೆ. ಇಂದು ಬಹಿರಂಗವಾಗಿ ಅಡ್ಜಸ್ಟಮೆಂಟ್ ರಾಜಕಾರಣದ ಬಗ್ಗೆ ಚರ್ಚೆ ಆಗ್ತಿರೋದು ದುರ್ದೈವ. ಬಹಿರಂಗವಾಗಿ ಹೀಗೆ ಮಾತನಾಡಬಾರದು. ಇದು ನಾಲ್ಕು ಗೋಡೆ ಮದ್ಯೆ ಮಾತಾಡುವ ವಿಚಾರ. ನಾನು ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ,‌ ಈ ರೀತಿ ಆಗದಂತೆ ನೋಡಿಕೊಳ್ಳಿ ಅಂದಿದ್ದೇನೆ. ಬಹಿರಂಗ ಹೇಳಿಕೆ ಕೊಡೋರ ಜೊತೆ ನಾನು ಮಾತಾಡ್ತೀನಿ ಎಂದು ತಿಳಿಸಿದರು.

More News