IND vs WI: ವಿಂಡೀಸ್ ಪ್ರವಾಸದ ಹಿನ್ನೆಲೆ: ತಯಾರಿ ಆರಂಭಿಸಿದ ಕುಲ್-ಚಾ ಜೋಡಿ

ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಆಟಗಾರರು ತಯಾರಿ ಆರಂಭಿಸಿದ್ದು, ಈ ನಡುವೆ ತಂಡದ ಸ್ಪಿನ್ ಜೋಡಿಯಾಗಿರುವ ಕುಲ್ದೀಪ್-ಚಹಲ್ ಸಹ ಭರ್ಜರಿ ತಯಾರಿ ಆರಂಭಿಸಿದ್ದಾರೆ.

ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯ ಹಿನ್ನೆಲೆಯಲ್ಲಿ ಕುಲ್ದೀಪ್ ಯಾದವ್ ಹಾಗೂ ಯುಜ್ವೇಂದ್ರ ಚಹಲ್ ಅವರಿಗೆ ವಿಂಡಿಸ್ ಪ್ರವಾಸಕ್ಕೆ ತಂಡದಲ್ಲಿ ಸ್ಥಾನ ನೀಡಲಾಗಿದ್ದು, ಹಲವು ವರ್ಷಗಳ ಬಳಿಕ ಈ ಇಬ್ಬರು ಒಟ್ಟಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಕೆರೆಬಿಯನ್ನರ ವಿರುದ್ಧ ತಮ್ಮ ಸ್ಪಿನ್ ಕಮಾಲ್ ಮಾಡಲು ಈ ಇಬ್ಬರು ಹೊಸ ರಣತಂತ್ರ ರೂಪಿಸಿಕೊಳ್ಳುತ್ತಿದ್ದಾರೆ. ಸತತ ಅಭ್ಯಾಸ ನಡೆಸುತ್ತಿರುವ ಫೋಟೋವನ್ನ ಚಹಲ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಐಪಿಎಲ್ ಟೂರ್ನಿಯಲ್ಲಿ ಈ ಇಬ್ಬರು ಸ್ಪಿನ್ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದರು. ರಾಜಸ್ಥಾನ ರಾಯಲ್ಸ್ ಪರವಾಗಿ ಕಣಕ್ಕಿಳಿದಿದ್ದ ಚಹಲ್, 14 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ರೇಸ್ ನಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಕುಲ್ದೀಪ್ ಯಾದವ್ ಸಹ 14 ಪಂದ್ಯಗಳನ್ನ ಆಡಿ ಕೇವಲ 10 ವಿಕೆಟ್‌ಗಳನ್ನು ಪಡೆದಿದ್ದರು.

ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಈ ಇಬ್ಬರು‌ ಸ್ಪಿನ್ನರ್ ಗಳಿಗೂ ಅತ್ಯಂತ ಪ್ರಮುಖ ಟೂರ್ನಿಯಾಗಿದೆ. ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ಮೂರು ಏಕದಿನ ಪಂದ್ಯಗಳನ್ನ ಆಡಲಿದ್ದು, ಈ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ವಿಶ್ವಕಪ್ ಟೂರ್ನಿಗೂ ಸಹ ತಂಡದಲ್ಲಿ ಸ್ಥಾನ ಪಡೆಯುವ ಲೆಕ್ಕಾಚಾರದಲ್ಲಿ ಇಬ್ಬರು ಸ್ಪಿನ್ನರ್ ಗಳು ತಯಾರಿ ನಡೆಸುತ್ತಿದ್ದಾರೆ.

ಜುಲೈ ಮೊದಲ ವಾರದಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಭಾರತ ಎರಡು ಟೆಸ್ಟ್, ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳನ್ನ ಆಡಲಿದ್ದು, ಸದ್ಯ ಟೆಸ್ಟ್ ಹಾಗೂ ಏಕದಿನ ಸರಣಿಗೆ ಮಾತ್ರ ಭಾರತ ತಂಡವನ್ನ ಪ್ರಕಟಿಸಲಾಗಿದೆ. ಹೀಗಾಗಿ ಏಕದಿನ ಸರಣಿಯ ಜೊತೆಗೆ ಟಿ೨೦ ಸರಣಿಗೂ ಸಹ ಈ ಇಬ್ಬರು ಸ್ಪಿನ್ನರ್ ಗಳನ್ನ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಕೂಡ ಇದೆ.

More News

You cannot copy content of this page