ವಿಜಯನಗರ: ಎರಡು ಆಟೋಗಳಿಗೆ ಲಾರಿ ಗುದ್ದಿ ಸ್ಥಳದಲ್ಲೇ 6 ಮಂದಿ ಮೃತಪಟ್ಟ ಘಟನೆ ಹೊಸಪೇಟೆಯ ಹೊರವಲದ ಬಳ್ಳಾರಿ ರಸ್ತೆಯ ವಡ್ಡರಹಳ್ಳಿ ಸೇತುವೆ ಬಳಿ ನಡೆದಿದೆ.
ಬಳ್ಳಾರಿಯಿಂದ ಟಿಬಿ ಡ್ಯಾಂ ನೋಡಲು ಬರುವಾಗ ವೇಗವಾಗಿ ಬಂದ ಲಾರಿ ಎರಡು ಆಟೋಗಳ ಮೇಲೆ ಹರಿದಿದೆ. ಅಪಘಾತ ವೇಳೆ ಒಟ್ಟು 6 ಮಂದಿ ಸಾವನ್ನಪ್ಪಿದ್ದು, ಘಟನೆಯಿಂದ ಗಾಯಗೊಂಡ ಇಬ್ಬರು ಮಕ್ಕಳು, ಒಬ್ಬ ಮಹಿಳೆಯನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆ ಗೆ ರವಾನಿಸಲಾಗಿದೆ.
ಮೃತರು ಬಳ್ಳಾರಿಯ ಕೌಲ್ ಬಜಾರ್ ನ ಗೌತಮ್ ನಗರದ ನಿವಾಸಿಗಳು ಎನ್ನಲಾಗಿದೆ. ಇನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಶಾಸಕ ಗವಿಯಪ್ಪ, ಈ ದುರಂತ ನಡೆಯಬಾರದಿತ್ತು. ಆ ಸೇತುವೆ ಬಹಳ ಡೆಂಜರ್ ಇವೆ. ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಅಂತ ನಾನು , ಎಂಪಿ ಅವರು ಚರ್ಚೆ ನಡೆಸಿದ್ದೇವೆ. ರಸ್ತೆ ಕಾಮಗಾರಿ ಬೇಗ ಮುಗಿಸಿ ಅಂತ ಹೇಳಿದ್ದೇನೆ. ಪರಿಹಾರಕ್ಕೆ ಸಂಬಂಧಿಸಿದಂತೆ ನಾನು, ಸಿಎಂ ಅವರಿಗೆ ಮಾತನಾಡಿದ್ದೇನೆ. ಬಳ್ಳಾರಿಯ ನಾಗೇಂದ್ರ ಅವರೂ ಕೂಡ ಈ ವಿಚಾರವಾಗಿ ಮಾತನಾಡುತ್ತಾರೆ ಎಂದರು. ಇನ್ನು ಸ್ಥಳಕ್ಕಾಗಮಿಸಿದ DYSP ವಿಶ್ವನಾಥ್ ಕುಲಕರ್ಣಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.