ಬೆಂಗಳೂರು: ನಾನು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ‘ಬಾಂಬೆ ಬಾಯ್ಸ್’ ಬಗ್ಗೆ ಮಾತನಾಡಲಿಲ್ಲ, ಕಾಂಗ್ರೆಸ್ ನಲ್ಲಿನ ಅಶಿಸ್ತು ನಮ್ಮಲ್ಲು ಬೀಸುತ್ತಿದೆ ಎಂದು ಹೇಳಿದ್ದು ನಿಜ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಮಾಜಾಯಿಸಿ ನೀಡುವ ಉದ್ದೇಶದಿಂದಲೇ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಾನು ಪ್ರಹ್ಲಾದ್ ಜೋಶಿ ಮಾತನಾಡಿರುವುದು ನಿಜ. ಅದನ್ನ ಕಾಂಗ್ರೆಸ್, ಜೆಡಿಎಸ್ ನವರ ಬಗ್ಗೆ ತಳುಕು ಹಾಕಲಾಯ್ತು, ಬಾಂಬೆ ಬಾಯ್ಸ್ ಬಗ್ಗೆ ಮಾತನಾಡಿದ್ದೇವೆ ಎಂದು ತಳಕು ಹಾಕಲಾಗಿತ್ತು ಎಂದು ಮಾಧ್ಯಮದವರ ಮೇಲೆ ಹಾಕಲು ಪ್ರಯತ್ನ ನಡೆಸಿದರು.
ನಾನು ಬಾಂಬೆ ಬಾಯ್ಸ್ ಅಂತ ಶಬ್ದ ಬಳಸಿಲ್ಲ, ಅವರ ಬಗ್ಗೆ ಎಲ್ಲೂ ಮಾತನಾಡಿಲ್ಲ, ಕಾಂಗ್ರೆಸ್, ಜೆಡಿಎಸ್ ನಿಂದ ಬಂದವರು ಅಶಿಸ್ತು ಮಾಡಿಲ್ಲ, ಟಿವಿಯಲ್ಲಿ ಬಂದಿದ್ದರಿಂದ ಎಲ್ಲರಿಗೆ ಬೇಸರವಾಗಿದೆ ಎಂದು ತಿಳಿಸಿದರು.

ಸೋಲನ್ನು ಒಪ್ಪಿಕೊಳ್ಳಬೇಕು
ವಿಧಾನಸಭೆ ಚುನಾವಣೆ ಸೋಲನ್ನು ನಾವು ಕೆಟ್ಟ ಕನಸಿನ ರೀತಿಯಲ್ಲಿ ಒಪ್ಪಿಕೊಳ್ಳಬೇಕು, ಇದೀಗ ಮುಂಬರುವ ಲೋಕಸಭೆ ಚುನಾವಣೆಗೆ ರೆಡಿಯಾಗಬೇಕು ಎಂದರು. ನಾವು ಪಕ್ಷವನ್ನ ಮತ್ತೆ ಕಟ್ಟುತ್ತೇವೆ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಚುನಾವಣೆ ಬಳಿಕ ಆಗಿದ್ದ ಗೊಂದಲದ ಗೂಡು ಬಗೆಹರಿದಿದೆ. ಅನೇಕ ಹಿರಿಯರು ಕುಳಿತು ಮಾತನಾಡಿದ್ದಾರೆ, ಅಸಮಾಧಾನವಿದ್ದರೆ ನಾಲ್ಕುಗೋಡೆ ಮಧ್ಯೆ ಬಗೆಹರಿಸಿಕೊಳ್ಳಿ ಎಂದು ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.
ನಾವು ಸೋಲನ್ನ ಒಪ್ಪಿಕೊಳ್ಳುತ್ತೇವೆ ಅದೇ ರೀತಿಯಲ್ಲಿ ನೀವು ನಿಮ್ಮ ಭರವಸೆಗಳನ್ನು ಜಾರಿ ಮಾಡಿ, ಇಲ್ಲವಾದಲ್ಲಿ ನಾವು ಬೀದಿಗಿಳಿಯುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ, ಅದೇ ರೀತಿಯಲ್ಲಿ ನಾವು ವಿಧಾನಮಂಡಲದ ಒಳಗೆ ಹಾಗೂ ಹೊರಗೆ ಧರಣಿ ಮಾಡುತ್ತೇವೆ ಎಂದರು.




