ಬಡವರ ಹೊಟ್ಟೆಗೆ ಹಣ.. ಖಾತೆಗೆ ಝಣಝಣ ಹಾಕುವ ಅಧಿಕೃತ ಆದೇಶವನ್ನ ರಾಜ್ಯ ಸರ್ಕಾರ ಹೊರಡಿಸಿದೆ.
ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಅನ್ನಭಾಗ್ಯ ೫ ಕೆಜಿ ಅಕ್ಕಿ ಬದಲಿಗೆ ಹಣ ನೀಡುವ ಸರ್ಕಾರಿ ಆದೇಶ ಇಂದು ಪ್ರಕಟವಾಗಿ ಪ್ರಕಟವಾಗಿದೆ. ೫ ಕೆಜಿ ಅಕ್ಕಿ ಹಾಗೂ ೫ ಕೆಜಿ ಅಕ್ಕಿ ಬದಲಿಗೆ ಪ್ರತೀ ಸದಸ್ಯನಿಗೆ ಒಂದು ಕೆಜಿಗೆ 34 ರೂಪಾಯಿಯಂತೆ 170 ರೂ ಹಣ ನೀಡುವ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗಿದೆ.

ಅಕ್ಕಿ ಸರಬರಾಜು ಜವಾಬ್ದಾರಿಯನ್ನು ರಾಜ್ಯ ಆಹಾರ ನಿಗಮ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ವಹಿಸಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಗೆ ಟೆಂಡರ್ ಕರೆಯಲಾಗಿದೆ. ಟೆಂಡರ್ ದಾರರು ಅಕ್ಕಿ ಸರಬರಾಜು ಮಾಡುವವರೆಗೆ ಅಥವಾ ಅಕ್ಕಿ ಲಭ್ಯವಾಗುವ ತನಕ ಡಿಬಿಟಿ ಯೋಜನೆ ಮುಂದುವರಿಕೆ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ.

ಇನ್ನು ಸರ್ಕಾರಿ ಆದೇಶ ಹೊರಡಿಸಿದ ಪ್ರತಿಯಲ್ಲೂ ಕೇಂದ್ರ ಎಫ್ ಸಿಐ ವಿರುದ್ದ ಆರೋಪ ಮಾಡಲಾಗಿದೆ. ಅಕ್ಕಿ ಖರೀದಿಗಾಗಿ ಪ್ರಸ್ತಾಪ ಸಲ್ಲಿಸಿ ಅಕ್ಕಿ ದಾಸ್ತಾನಿದೆ ಎಂದು ತಿಳಿಸಿ ಬಳಿಕ ಓಎಂಎಸ್ ಎಸ್ (ಡೊಮೆಸ್ಟಿಕ್) (OMSS(D) ಯೋಜನೆ ಅಡಿ ಅಕ್ಕಿ ಪೂರೈಕೆ ಸ್ಥಗಿತ ಮಾಡಲಾಗಿದೆ. ಹೀಗಾಗಿ 2.22 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಕೆಗೆ ಮುಕ್ತ ಮಾರುಕಟ್ಟೆಯಲ್ಲಿ ಟೆಂಡರ್ ಆಹ್ವಾನ ನೀಡಲಾಗಿದ್ದು, ಗ್ಲೋಬಲ್ ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಅಕ್ಕಿ ಪೂರೈಕೆಗೆ ಕನಿಷ್ಟ ೬-೮ ತಿಂಗಳ ಕಾಲಾವಕಾಶ ಅಗತ್ಯವಿದೆ ಎಂದು ಮಾಹಿತಿ ನೀಡಲಾಗಿದೆ.




