ಬೆಂಗಳೂರು : ಇಂದಿನಿಂದ ವಿಧಾನಸಭೆ ಕಲಾಪ ಆರಂಭ ಆಗಲಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಯ ಗೊಂದಲ, ವಿವಾದಾತ್ಮಕ ಮಸೂದೆ ರದ್ದು ಸೇರಿದಂತೆ ಅನೇಕ ವಿಚಾರ ಇಟ್ಕೊಂಡು ಕೈ ವಿರುದ್ಧ ವಾಗ್ದಾಳಿ ನಡೆಸಲು ಕೇಸರಿ ಕಲಿಗಳು ಸಿದ್ದತೆ ನಡೆಸುತ್ತಿದ್ದಾರೆ. ಆದ್ರೆ ಸೂತ್ರಧಾರನೇ ಇಲ್ಲದೇ ಕಲಾಪಕ್ಕೆ ಬಿಜೆಪಿ ನಾಯಕರು ಆಗಮಿಸುತ್ತಿರೋದೇ ಭಾರೀ ಟೀಕೆಗೆ ಗುರಿಯಾಗಿದೆ.

ರಾಜ್ಯ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಬಿಜೆಪಿ ಹೈಕಮಾಂಡ್ ಎಚ್ಚರಿಕೆ ಹೆಜ್ಜೆ ಇಡಲು ನಿರ್ಧರಿಸಿದೆ. ವಿಪಕ್ಷ ನಾಯಕ ಯಾರು ಎಂಬ ಬಗ್ಗೆ ಪಕ್ಷದ ಒಳಗೇ ನಡೆಯುತ್ತಿರುವ ಜಟಾಪಟಿ ತಣಿಸಲು ನಿನ್ನೆ ತಡರಾತ್ರಿ ವರೆಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರ ಜೊತೆಗೆ ಬಿಜೆಪಿ ಹೈಕಮಾಂಡ್ ನಾಯಕರಾದ ಅಮಿತ್ ಷಾ, ಜೆಪಿ ನಡ್ಡಾ ದೆಹಲಿಯಲ್ಲಿ ಸಭೆ ನಡೆಸಿದರು. ಆದರೆ ಸಭೆಯಲ್ಲಿ ವಿಪಕ್ಷ ನಾಯಕ ಯಾರು ಎಂಬ ಬಗ್ಗೆ ಒಮ್ಮತದ ಅಭಿಪ್ರಾಯ ಇಲ್ಲದ ಕಾರಣ ಇಂದು ದೆಹಲಿ ವಿಪಕ್ಷ ನಾಯಕ ಆಯ್ಕೆ ಸಮಿತಿಯೇ ಬೆಂಗಳೂರಿಗೆ ಬರಲು ಸಜ್ಜಾಗಿದೆ.
ಇನ್ನೊಂದೆಡೆ ವಿಧಾನ ಪರಿಷತ್ ನಲ್ಲೂ ಪ್ರತಿಪಕ್ಷದ ನಾಯಕನಿಲ್ಲದೆ ಬಿಜೆಪಿ ಪಕ್ಷ ಸೊರಗುತ್ತಿದೆ. ಅಲ್ಲಿ ಈ ಹಿಂದಿನಂದ ಸಭಾ ನಾಯಕ ಹಾಗೂ ವಿರೋಧ ಪಕ್ಷದ ನಾಯಕರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರ ಬಗ್ಗೆ ಅನೇಕ ಶಾಸಕರ ಒಲವು ಇಲ್ಲದೇ ಇರುವುದರಿಂದ ಆಯ್ಕೆ ಕಗ್ಗಂಟಾಗಿದೆ.

ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನೂ ತುಂಬಲು ಬಿಜೆಪಿ ಪಕ್ಷಕ್ಕೆ ಇದುವರೆಗೂ ಆಗಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ನಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿಗೆ ನಾಯಕರ ಆಯ್ಕೆಯೂ ಕಗ್ಗಂಟಾಗಿ ಪರಿಣಮಿಸಿದೆ. ಶಿಸ್ತಿನ ಪಕ್ಷ ಎಂಬ ಖ್ಯಾತಿ ಪಡೆದಿದ್ದ ಬಿಜೆಪಿಯಲ್ಲೀಗ ಎಲ್ಲಾವೂ ಅಯೋಮಯವಾಗಿದೆ.
ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ
ವಿಪಕ್ಷ ನಾಯಕನ ಆಯ್ಕೆ ಕಸರತ್ತು ದೆಹಲಿಯಿಂದ ಬೆಂಗಳೂರಿಗೆ ಶಿಪ್ಟ್ ಆಗಿದೆ. ನಿನ್ನೆ ನಡೆದ ಸಭೆಯಲ್ಲಿ ವಿಪಕ್ಷ ನಾಯಕ ಆಯ್ಕೆ ಬದಲು ವೀಕ್ಷಕರನ್ನು ವರಿಷ್ಠ ರು ನೇಮಿಸಿದ್ದಾರೆ. ವೀಕ್ಷಕರಾಗಿ ವಿನೋದ್ ತಾವಡೆ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯ ರನ್ನು ನೇಮಿಸಿದ್ದು, ಶಾಸಕರ ಅಭಿಪ್ರಾಯ ದ ಮೇರೆ ಗೆ ವಿಪಕ್ಷ ನಾಯಕ ಆಯ್ಕೆ ಮಾಡಲು ನಿರ್ಧರಿಸಿದೆ. ಶಾಸಕರ ಅಭಿಪ್ರಾಯ ಪಡೆದು ವಿಪಕ್ಷ ನಾಯಕನ ಆಯ್ಕೆ ಮಾಡಲು ಕನಿಷ್ಟ ಎರಡು ದಿನಗಳ ಅಗತ್ಯ ಇದ್ದು, ಸದನಕ್ಕೆ ವಿಪಕ್ಷ ನಾಯಕನಿಲ್ಲದೇ ಹಾಜರಾಗಲು ಕಮಲ ಪಡೆ ಸಜ್ಜಾಗಿದೆ.





