BJP’s “Guarantee” Fight In Session: ಸದನದಲ್ಲಿ ಬಿಜೆಪಿ “ಗ್ಯಾರಂಟಿ” ಫೈಟ್ : ನಿಲುವಳಿ ಸೂಚನೆ ಚರ್ಚೆಗೆ ಬಿಗಿಪಟ್ಟು

ಬೆಂಗಳೂರು : ಚುನಾವಣಾ ಪೂರ್ವ ಕಾಂಗ್ರೆಸ್ ಜನತೆಗೆ ನೀಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಉಂಟಾಗಿರುವ ಗೊಂದಲ ವಿಚಾರವನ್ನು ಪ್ರತಿಪಕ್ಷ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಇಂದು ಪ್ರಸ್ತಾಪ ಮಾಡಲು ಮುಂದಾಗಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ, ಆರೋಪ-ಪ್ರತ್ಯಾರೋಪ ನಡೆದು ಕೋಲಾಹಲದ ವಾತಾವರಣ ಉಂಟಾಗಿತ್ತು.
ಇದು ಅಷ್ಟಕ್ಕೆ ನಿಲ್ಲದೆ ಬಿಜೆಪಿ ಸದ್ಯರು ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪಕ್ಕೆ ಅವಕಾಶ ನೀಡುವಂತೆ ಪಟ್ಟು ಹಿಡಿದು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದ್ದರಿಂದ ಸದನದ ಕಲಾಪವನ್ನು ಕೆಲ ಕಾಲ ಮುಂದೂಡಿದ ಪ್ರಸಂಗ ನಡೆಯಿತು.
ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ ಮರುದಿನವೇ ವಿಧಾನಸಭೆ ಇಂದು ಬೆಳಗ್ಗೆ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಕಾರ್ಯಸೂಚಿಯಂತೆ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು.


ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡರಿಗೆ ಪ್ರಶ್ನೆ ಕೇಳಲು ಆಹ್ವಾನಿಸಿದ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರ ನೀಡಲು ಮುಂದಾಗುತ್ತಿದ್ದಂತೆಯೇ ಏಕಾಏಕಿ ಎದ್ದುನಿಂತ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸುನೀಲ್ ಕುಮಾರ್ ಸರ್ಕಾರ ನೀಡಿರುವ ಗ್ಯಾರಂಟಿಗಳ ವಿಚಾರದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ನಾವು ನಿಲುವಳಿ ಸೂಚನೆ ನೀಡಿದ್ದೇವೆ. ಇದಕ್ಕೆ ಪ್ರಸ್ತಾವಿಕವಾಗಿ ಮಾತನಾಡಲು ಅವಕಾಶ ನೀಡಬೇಕೆಂದು ಸಭಾಧ್ಯಕ್ಷರನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ಈಗಾಗಲೇ ಪ್ರಶ್ನೋಿತ್ತರ ಕಲಾಪ ನಡೆಯುತ್ತಿದೆ. ಶಾಸಕರ ಪ್ರಶ್ನೆಧಗೆ ಗೃಹಸಚಿವರು ಉತ್ತರ ನೀಡುತ್ತಿದ್ದಾರೆ. ಈ ಹಂತದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಲು ಬರುವುದಿಲ್ಲ. ಪ್ರಶ್ನೋತ್ತರ ಮತ್ತು ಶೂನ್ಯವೇಳೆ ಮುಗಿದ ನಂತರ ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಇದಕ್ಕೆ ಸಮಾಧಾನಗೊಳ್ಳದ ಬೊಮ್ಮಾಯಿ ಹಾಗೂ ಇತರ ಬಿಜೆಪಿ ಸದಸ್ಯರು, ಪ್ರಶ್ನೋತ್ತರ ಮುಂದೂಡಿ ರೂಲಿಂಗ್ ನೀಡುವ ಮೂಲಕ ನಿಲುವಳಿಗೆ ಪ್ರಸ್ತಾವಿಕವಾಗಿ ಮಾತನಾಡಲು ಅವಕಾಶ ಕೊಡಬೇಕೆಂದು ಪಟ್ಟು ಹಿಡಿದರು.


ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಸದಸ್ಯರು ಉತ್ಸಾಹದಲ್ಲಿದ್ದಾರೆ. ಅವರ ನುಡಿಮುತ್ತುಗಳನ್ನು ಕೇಳಲು ನಾವು ಸಹ ಕಾತರರಾಗಿದ್ದೇವೆ. ಐದು ಗ್ಯಾರಂಟಿಗಳನ್ನು ನೀಡಿರುವುದು ಅವರಿಂದ ತಡೆದುಕೊಳ್ಳಲು ಆಗುತ್ತಿಲ್ಲ. ಕಳೆದ 45 ದಿನಗಳಿಂದ ಅವರು ಸಂಕಟ ಅನುಭವಿಸುತ್ತಿದ್ದಾರೆ. ಪ್ರಶ್ನೋತ್ತರ ಕಲಾಪದ ನಂತರ ಚರ್ಚೆಗೆ ಅವಕಾಶ ಕೊಡಿ ಎಂದು ಸಭಾಧ್ಯಕ್ಷರ ಬೆಂಬಲಕ್ಕೆ ನಿಂತರು. ಶಿವಕುಮಾರ್ ಅವರ ಮಾತುಗಳಿಗೆ ಸಮಾಧಾನಗೊಳ್ಳದ ಪ್ರತಿಪಕ್ಷದ ಸದ್ಯರು ತಮ್ಮ ನಿಲುವಿಗೆ ಅಂಟಿಕೊಂಡರು. ಈ ಹಂತದಲ್ಲಿ ವಾದ-ವಾಗ್ವಾದ ಜೋರಾಗಿ ನಡೆಯಿತು.
ಬಸವರಾಜ ಬೊಮ್ಮಾಯಿ ಮಾತನಾಡಿ, ಉಚಿತ, ನಿಶ್ಚಿಗತ, ಖಚಿತಗಳ ಬಗ್ಗೆ ಚರ್ಚೆ ಆಗಲೇ ಬೇಕು. ನಿಲುವಳಿಗೆ ಪೂರ್ವಭಾವಿಯಾಗಿ ಪ್ರಸ್ತಾಪ ಮಾಡಲು ಅವಕಾಶ ನೀಡಲೇ ಬೇಕು ಎಂದು ಆಗ್ರಹಿಸಿದರು.
ಗದ್ದಲದ ನಡುವೆಯೇ ಎದ್ದು ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರತಿಪಕ್ಷದ ಸದಸ್ಯರು ನೀಡಿರುವ ನೋಟಿಸ್ ಅನ್ನು ಓದಲಾರಂಭಿಸಿದರು. ನಿಯಮ 60 ರ ಮೇರೆಗೆ ನಿಲುವಳಿ ಸೂಚನೆಯಡಿ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೋಮತ್ತರ ಮತ್ತು ಶೂನ್ಯ ವೇಳೆ ನಂತರ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಅವರೇ ಕೇಳಿದ್ದಾರೆ. ಪ್ರಶ್ನೋತ್ತರ ನಂತರ ಚರ್ಚೆ ಮಾಡಬಹುದಾಗಿದೆ. ಅದರ ಬದಲು ಮೊಂಡಾಟ ಮಾಡುವುದು ಸರಿಯಲ್ಲ ಎಂದದ್ದು ಬಿಜೆಪಿ ಸದಸ್ಯರನ್ನು ಕೆರಳಿಸಿತು.


ಬಿಜೆಪಿ ಹಿರಿಯ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ , ಮೊಂಡಾಟ ಎಂಬ ಪದವನ್ನು ಆಡಿದ್ದು ಸಿದ್ದರಾಮಯ್ಯಅವರಿಗೆ ಶೋಭೆ ತರುವುದಿಲ್ಲ. ಈ ಪದವನ್ನು ಕಡತದಿಂದ ತೆಗೆಸಬೇಕೆಂದು ಒತ್ತಾಯಿಸಿದರು.
ಇದೇ ಹಂತದಲ್ಲಿ ಮಾಜಿ ಸಚಿವ ಡಾ.ಸಿ.ಎನ್. ಅಶ್ವಪತ್ಥ್ನಾರಾಯಣ ಅವರು ಸಿದ್ದರಾಮಯ್ಯ ಮಾತಿಗೆ ಆಕ್ಷೇಪ ವ್ಯಕ್ತಪಡಿಸಲು ಮುಂದಾದಾಗ, ಮಧ್ಯಪ್ರವೇಶಿಸಿದ ಸಿದ್ದಾರಾಮಯ್ಯ, ಅಶ್ವಗತ್ಥಕನಾರಾಯಣ ಅವರೇ ನೀವು ಮಂತ್ರಿಯಾಗಿದ್ದವರು. ಭಾವನಾತ್ಮಕವಾಗಿ ಮಾತನಾಡಬೇಡಿ ಎಂದರು.
ನಾನು ಐದು ವರ್ಷ ಪ್ರತಿಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ಪ್ರಶ್ನೋಾತ್ತರಕ್ಕೆ ಮುನ್ನ ಎಂದೂ ನಿಲುವಳಿ ಸೂಚನೆ ಕುರಿತು ಚರ್ಚೆಗೆ ಹಿಂದಿನ ಸಭಾಧ್ಯಕ್ಷರು ಎಂದೂ ಕಾಲಾವಕಾಶ ಕೊಟ್ಟಿಲ್ಲ. ಆ ರೀತಿ ಏನಾದರೂ ಆಗಿರುವ ಒಂದು ನಿದರ್ಶನ ತೋರಿಸಲಿ, ನಾನು ಈ ಬಗ್ಗೆ ಮಾತನಾಡುವುದಿಲ್ಲ. ಹಿಂದಿನ ಸಭಾಧ್ಯಕ್ಷರು ನಾವು ಕೊಟ್ಟ ನಿಲುವಳಿ ಸೂಚನೆಗಳನ್ನು ನಿಯಮ 69 ಕ್ಕೆ ಪರಿವರ್ತಿಸಿ ಚರ್ಚೆಗೆ ಸಮಯ ನಿಗದಿಪಡಿಸಿದ್ದಾರೆ ಎಂದು ಪ್ರತಿಪಕ್ಷದ ಸದಸ್ಯರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.
ಪ್ರತಿಪಕ್ಷಗಳು ಎತ್ತುವ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು ಸಿದ್ಧರಾಗಿದ್ದೇವೆ. ಹೆದರಿಕೊಂಡು ಹೋಗುವುದಿಲ್ಲ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿ ಮಾತನಾಡಿ, ನಿಲುವಳಿಗೆ ಪೂರ್ವಭಾವಿ ಪ್ರಸ್ತಾಪಕ್ಕೆ ನಾವು ಒತ್ತಾಯಿಸುತ್ತಿದ್ದೇವೆ. ಪೂರ್ಣಪ್ರಮಾಣದ ಚರ್ಚೆಗೆ ಪ್ರಶ್ನೋತ್ತರ ನಂತರವೇ ಸಭಾಧ್ಯಕ್ಷರು ಅವಕಾಶ ಕೊಡಲಿ, ಅದು ಅವರ ಪರಮಾಧಿಕಾರ ಎಂದರು. ಈ ನಡುವೆ ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ಕ್ರಿಯಾಲೋಪ ಎತ್ತಲು ಮುಂದಾದರು.


ಇದಕ್ಕೂ ಜಗ್ಗದ ಬಿಜೆಪಿ ಸದಸ್ಯರು ಸಭಾಧ್ಯಕ್ಷ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ಈ ನಡುವೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಎದ್ದುನಿಂತು, ನಿಮಗೆ ಪ್ರತಿಪಕ್ಷದ ನಾಯಕರೇ ಇಲ್ಲವೆಂದು ಬಿಜೆಪಿ ವಿರುದ್ಧ ಮೂದಲಿಸಿದರು.
ನಂತರ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಬಿಜೆಪಿ ಸದಸ್ಯರ ಧೋರಣೆಯನ್ನು ಆಕ್ಷೇಪಿಸಿ, ನಿಮ್ಮ ಅನುಚಿತ ವರ್ತನೆ ಸರಿಯಲ್ಲ. ರಾಜ್ಯದ ಜನ ನೋಡುತ್ತಿದ್ದಾರೆ. ನಿಮ್ಮ ನೋಟಿಸ್ ನಲ್ಲೇ ಪ್ರಶ್ನೋತ್ತರ ನಂತರ ನಿಲುವಳಿ ಸೂಚನೆಗೆ ಅವಕಾಶ ಕೊಡಿ ಎಂಬುದಾಗಿ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ರೀತಿ ಧರಣಿ ಮಾಡುವುದು ಸರಿಯಲ್ಲ. ನಿಮ್ಮ ನಿಮ್ಮ ಸ್ಥಾನಗಳಿಗೆ ತೆರಳಿ ಕಲಾಪ ನಿಯಮಾವಳಿ ಪ್ರಕಾರ ನಡೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.ಸ್ಪೀಕರ್ ಮನವಿಗೆ ಓಗೊಡದ ಬಿಜೆಪಿ ಸದಸ್ಯರು ಧರಣಿ ನಡೆಸಿ ಗದ್ದಲ ಎಬ್ಬಿಸಿದರು. ಇದರ ನಡುವೆಯೇ ಸಭಾಧ್ಯಕ್ಷರು ಸದನವನ್ನು ಹದಿನೈದು ನಿಮಿಷಗಳ ಕಾಲ ಮುಂದೂಡಿದರು.

ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣದ ನಂತರ ವಿಧಾನಸಭೆಯ ಮೊದಲ ದಿನದ ಅಧಿವೇಶನ ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಹ ಪ್ರಸಂಗ ನಡೆಯಿತು.
ನಿಯಮಾವಳಿ ಪ್ರಕಾರ ಸದನದ ಕಾರ್ಯಕಲಾಪಗಳನ್ನು ನಡೆಸಲು ಅತ್ಯಂತ ಉತ್ಸಾಹದಿಂದ ಸದನಕ್ಕೆ ಬಂದಿದ್ದ ಖಾದರ್ ಅವರಿಗೆ ಬಿಜೆಪಿ ಸದಸ್ಯರ ಧೋರಣೆಯಿಂದ ಕೆಲಕಾಲ ವಿಚಲಿತರಾದಂತೆ ಕಂಡುಬಂದರು.
ಐದು ಗ್ಯಾರಂಟಿಗಳ ವಿಚಾರ ಕುರಿತು ಬಿಜೆಪಿ ಸದಸ್ಯರು ಸಲ್ಲಿಸಿದ ನಿಲುವಳಿ ಸೂಚನೆಗೆ ಪೂರ್ವಭಾವಿಯಾಗಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಪ್ರಶ್ನೋತ್ತರದ ನಡುವೆ ಒತ್ತಾಯಿಸಿ ಗದ್ದಲ ಎಬ್ಬಿಸಿದ್ದು ಮೊದಲ ದಿನದ ಕಾರ್ಯಕಲಾಪದಲ್ಲಿ ಕಂಡುಬಂತು.

More News