IND vs WI: ವಿಂಡೀಸ್ ಟಿ20 ಸರಣಿ: ಯುವ ಆಟಗಾರರಿಗೆ ಬಿಸಿಸಿಐ ಆದ್ಯತೆ

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನ ಪ್ರಕಟಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಂಡದ‌ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಆ ಮೂಲಕ ಭವಿಷ್ಯದ ಭಾರತ ತಂಡ ಕಟ್ಟುವತ್ತ ದಿಟ್ಟ ಹೆಜ್ಜೆ ಇರಿಸಿದೆ.

ವಿಂಡೀಸ್ ಪ್ರವಾಸಕ್ಕೆ ತೆರಳಿರುವ ಭಾರತ ತಂಡ, ಕೆರೆಬಿಯನ್ನರ ವಿರುದ್ಧ ಟೆಸ್ಟ್, ಏಕದಿನ ಪಂದ್ಯಗಳ ಬಳಿಕ ಒಟ್ಟು ಐದು T20I ಪಂದ್ಯಗಳನ್ನ ಆಡಲಿದ್ದು, ಉಭಯ ತಂಡಗಳ ನಡುವಿನ ಟಿ20 ಸರಣಿ ಆಗಸ್ಟ್ 3ರಿಂದ ಆರಂಭವಾಗಲಿದೆ. ಈ ಸರಣಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಸೇರಿ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ವಿಂಡೀಸ್ ಟಿ20 ಸರಣಿಗೆ ಹಲವು ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ.

ಪ್ರಮುಖವಾಗಿ ವಿಂಡೀಸ್ ಪ್ರವಾಸಕ್ಕೆ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ್ದ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ ಅವರುಗಳಿಗೆ ಭಾರತದ ರಾಷ್ಟ್ರೀಯ ತಂಡಕ್ಕೆ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ. ಇವರ ಜೊತೆಗೆ ಬ್ಯಾಟಿಂಗ್ ವಿಭಾಗದಲ್ಲಿ ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಸಂಜೂ ಸ್ಯಾಮ್ಸನ್ ಅವರುಗಳನ್ನ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿ ಆಯ್ಕೆ ಮಾಡಲಾಗಿದೆ. ಇವರೊಂದಿಗೆ ಬೌಲಿಂಗ್ ವಿಭಾಗದಲ್ಲೂ ಸಹ ಯುವ ಆಟಗಾರರಿಗೆ ಅವಕಾಶ ನೀಡಲಾಗಿದ್ದು, ವೇಗದ ಬೌಲರ್‌ಗಳಾಗಿ ಉಮ್ರಾನ್ ಮಲ್ಲಿಕ್, ಆವೇಶ್ ಖಾನ್, ಅರ್ಶದೀಪ್‌ ಸಿಂಗ್, ಮುಖೇಶ್ ಕುಮಾರ್ ಅವರನ್ನ ಆಯ್ಕೆ ಮಾಡಲಾಗಿದೆ.

ಇನ್ನೂ ಸ್ಪಿನ್ ಬೌಲರ್‌ಗಳಾಗಿ ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯಿ ಹಾಗೂ ಅಕ್ಸರ್ ಪಟೇಲ್ ಅವರನ್ನ ಆಯ್ಕೆ ಮಾಡಲಾಗಿದೆ. ನಿರೀಕ್ಷೆಯಂತೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಆ ಮೂಲಕ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಿರುವ ಬಿಸಿಸಿಐ, ಭವಿಷ್ಯದ ಭಾರತ ತಂಡವನ್ನ ಕಟ್ಟುವ ಮುನ್ಸೂಚನೆ ನೀಡಿದ್ದರು, ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯ ಉದ್ದೇಶದಿಂದಲೂ ಸಹ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಐಪಿಎಲ್ ಹೀರೋಗಳಿಗೆ ನಿರಾಸೆ

ವಿಂಡೀಸ್ ವಿರುದ್ಧದ ಟಿ20 ಸರಣಿಗೆ ತಂಡವನ್ನ ಪ್ರಕಟಿಸಿರುವ ಬಿಸಿಸಿಐ 2023ರ ಐಪಿಎಲ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಕೆಲವು ಯುವ ಆಟಗಾರರನ ಆಯ್ಕೆ ಮಾಡುವಲ್ಲಿ ಆಸಕ್ತಿ ತೋರಿಲ್ಲ. ಪ್ರಮುಖವಾಗಿ ಋತುರಾಜ್ ಗಾಯಕ್ವಾಡ್, ರಿಂಕು ಸಿಂಗ್ ಅವರುಗಳಿಗೆ ಭಾರೀ ನಿರಾಸೆ ಉಂಟಾಗಿದ್ದು, ಈ ಇಬ್ಬರು ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದರು. ಆದರೆ ಆಯ್ಕೆ ಸಮಿತಿ ಈ ಇಬ್ಬರನ್ನ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ನಿರಾಸಕ್ತಿ ತೋರಿದೆ.

ವಿಶ್ವಕಪ್‌ಗೆ ಹಾರ್ದಿಕ್ ಸಾರಥ್ಯ?

ವಿಂಡೀಸ್ ವಿರುದ್ಧದ ಟಿ20 ಸರಣಿಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರುಗಳಿಗೆ ವಿಶ್ರಾಂತಿ ನೀಡಲಾಗಿದ್ದು, ಈ ಇಬ್ಬರು ಆಟಗಾರರು ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ನಿಂದ ಹೊರಬಿದ್ದ ಬಳಿಕ ಯಾವುದೇ ಟಿ20 ಪಂದ್ಯಗಳನ್ನ ಆಡಿಲ್ಲ. ಇದನ್ನ ಗಮನಿಸಿದರೆ 2024ರಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಗೆ ಹಾರ್ದಿಕ್ ಪಾಂಡ್ಯ ‌ನಾಯಕತ್ವದಲ್ಲಿ ಆಡುವ ಎಲ್ಲಾ ಸಾಧ್ಯತೆಗಳು ಸ್ಪಷ್ಟವಾಗಿದೆ. ಅನುಭವಿ ಆಟಗಾರರ ಬದಲಿಗೆ ಯುವ ಆಟಗಾರರಿಗೆ ಮಣೆ ಹಾಕಿರುವ ಬಿಸಿಸಿಐ, ಇದೇ ಕಾರಣದಿಂದಾಗಿ ಇತ್ತೀಚಿಗೆ ನಡೆದ ಟಿ20 ಸರಣಿಗಳಿಗೆ ಹಲವು ಯುವ ಆಟಗಾರರಿಗೆ ಅವಕಾಶ ನೀಡುತ್ತಿದೆ.

ಟಿ20 ಸರಣಿಗೆ ಭಾರತ ತಂಡ:
ಹಾರ್ದಕ್ ಪಾಂಡ್ಯ(ನಾಯಕ), ಸೂರ್ಯಕುಮಾರ್ ಯಾದವ್(ಉಪ ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ತಿಲಕ್ ವರ್ಮ, ಸಂಜೂ ಸ್ಯಾಮ್ಸನ್, ಇಶಾನ್ ಕಿಶನ್, ಅಕ್ಸರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯಿ, ಅರ್ಶದೀಪ್ ಸಿಂಗ್, ಉಮ್ರಾನ್ ಮಲ್ಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.

More News