Salaar Movie Teaser: ಕೆಜಿಎಫ್ 2′ ಚಿತ್ರಕ್ಕೆ ಸಲಾರ್’ ಲಿಂಕ್?

ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಹುನಿರೀಕ್ಷಿತ ‘ಸಲಾರ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ‘ಸಲಾರ್’ ಟೀಸರ್ ವೀಕ್ಷಿಸಿದ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.’ಕೆಜಿಎಫ್ ೨’ ಹಾಗು ‘ಸಲಾರ್’ ಸಿನಿಮಾಕ್ಕೆ ಲಿಂಕ್ ನೀಡಿರುವುದು ಅಭಿಮಾನಿಗಳಲ್ಲಿ ಖುಷಿಗೆ ಕಾರಣವಾಗಿದೆ.

‘ಕೆಜಿಎಫ್ 2’ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ರಾಕಿ ಮುಂಜಾನೆ ೫ ಗಂಟೆಗೆ ಸಮುದ್ರಕ್ಕೆ ಬೀಳುತ್ತಾನೆ. ಆದರೆ ಸಲಾರ್ ಚಿತ್ರ ಟೀಸರ್ ಮುಂಜಾನೆ ೫.೧೨ ಕ್ಕೆ ರಿಲೀಸ್ ಆಗಿದೆ. ಆದರೂ ಈ ಚಿತ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಸೆಪ್ಟೆಂಬರ್ ನಲ್ಲಿ ತೆರೆ ಕಾಣಲಿರುವ ಸಿನಿಮಾದಲ್ಲಿ ನಟ ಪ್ರಭಾಸ್, ಪೃಥ್ವಿ ರಾಜ್ ಸೇರಿದಂತೆ ಬಹುನಟರ ತಾರಾಗಣವಿದೆ.

‘ಕೆಜಿಎಫ್ 2’ ಸಿನಿಮಾದಲ್ಲಿ ಒಂದಷ್ಟು ಟ್ಯಾಂಕರ್​ಗಳು ಕಂಡಿದ್ದವು. ಆ ಪೈಕಿ ಒಂದು ಟ್ಯಾಂಕರ್ ಹೆಸರು ‘ಸಿ-516’. ‘ಸಲಾರ್’ ಸಿನಿಮಾದಲ್ಲೂ ಅದೇ ನಂಬರ್​ನ ಟ್ಯಾಂಕರ್ ಕಾಣಿಸಿದೆ. ಹೀಗಾಗಿ, ‘ಕೆಜಿಎಫ್ 2’ ಚಿತ್ರದ ಮುಂದುವರಿದ ಭಾಗದ ರೀತಿಯಲ್ಲಿ ‘ಸಲಾರ್’ ಸಿನಿಮಾ ಮೂಡಿಬರಲಿದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

ಒಟ್ಟಾರೆ ‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ ಚಿತ್ರಕ್ಕೂ ಇರುವ ಲಿಂಕ್ ಗಮನಿಸಿದ ಅನೇಕರು ಥ್ರಿಲ್ ಆಗಿದ್ದಾರೆ. ಎರಡೂ ಚಿತ್ರಗಳ ಮಧ್ಯೆ ಯಾವ ರೀತಿಯಲ್ಲಿ ಕನೆಕ್ಷನ್ ಇರಲಿದೆ ಅನ್ನೋದೇ ಸಸ್ಪೆನ್ಸ್. ಹೊಂಬಾಳೆ ಫಿಲ್ಮ್ಸ್ ಈ ಚಿತ್ರ ನಿರ್ಮಿಸುತ್ತಿದ್ದು, ರವಿ ಬಸ್ರೂರು ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಟೀಸರ್ ನಲ್ಲೇನಿದೆ?

೧.೪೬ ನಿಮಿಷ ಇರುವ ಟೀಸರ್ ನಲ್ಲಿ ಮಾಸ್ ಎಲಿಮೆಂಟ್ ಗಳ ಸರಮಾಲೆ ಇದೆ. ವಿದೇಶಿ ವಿಲನ್ ಗಳ ಗುಂಪು ಒಬ್ಬ ನನ್ನು ಗುಂಡಿಕ್ಕಿ ಕೊಲ್ಲಲು ತಯಾರಾದಾಗ ಆ ವಿಲನ್ ಗಳ ಜತೆಗೆ ನಟ ಟಿನ್ನು ಆನಂದ್ ಡೈಲಾಗ್ ಶುರುವಾಗುತ್ತದೆ. ‘ಸಿಂಪಲ್ ಇಂಗ್ಲಿಷ್.. ನೋ ಕನ್‌ಫ್ಯೂಷನ್..” ಎಂದು ಡೈಲಾಗ್ ಆರಂಭಿಸುವ ಆತ “ಲಯನ್, ಚೀತಾ, ಟೈಗರ್, ಎಲಿಫೆಂಟ್ ವೆರಿ ಡೇಂಜರಸ್.. ಬಟ್.. ನಾಟ್ ಇನ್ ಜುರಾಸಿಕ್ ಪಾರ್ಕ್.. ಬಿಕಾಸ್ ಇನ್ ದಟ್ ಪಾರ್ಕ್, ದೇರ್ ಈಸ್ ಎ..” ಎಂದು ನಾಯಕ ನಟ ಪ್ರಭಾಸ್‌ಗೆ ಬಿಲ್ಡಪ್ ಕೊಡುತ್ತಾನೆ. ಖಳ ನಾಯಕರ ಅಟ್ಟಹಾಸವನ್ನು ತೋರಿಸುವ ಪ್ರಶಾಂತ್ ನೀಲ್, ಬಳಿಕ ಪ್ರಭಾಸ್ ಮಾಸ್ ಅವತಾರವನ್ನು ತೋರಿಸಿದ್ದಾರೆ. ಈ ಟೀಸರ್ ನಲ್ಲಿ ನಾಯಕನನ್ನು ವೈಭವೀಕರಿಸಲಾಗಿದೆ ಹೊರತು ಎಲ್ಲೂ ನಾಯಕನ ಡೈಲಾಗ್ ಕಾಣುವುದಿಲ್ಲ. ಒಂದು ದೃಶ್ಯ ದಲ್ಲಿ ಮಾತ್ರ ಪ್ರಭಾಸ್ ಸೈಡ್ ಆ್ಯಂಗಲ್ ತೋರಿಸಲಾಗಿದೆ. ಟೀಸರ್ ಉದ್ದಕ್ಕೂ ಗಣಿಯೊಂದರಲ್ಲಿ ನಡೆಯುವ ಫೈಟ್ ಸೀನ್‌ನ ದೃಶ್ಯಗಳನ್ನು ತೋರಿಸಲಾಗಿದೆ. ಈ ದೃಶ್ಯಗಳು ವೀಕ್ಷಕರಿಗೆ ಕೆಜಿಎಫ್ ಚಿತ್ರವನ್ನು ನೆನಪಿಸಿವೆ. ಚಿತ್ರದ ಕಂಟೆಂಟ್ ಅನ್ನು ಸ್ವಲ್ಪ ತೋರಿಸಿ ಕಥೆಯ ಕುರಿತು ನಿಗೂಢತೆ ಉಳಿಸಿಕೊಂಡಿದ್ದಾರೆ ಪ್ರಶಾಂತ್ ನೀಲ್.
ಕೆಜಿಎಫ್ ತಂಡದ ಸದಸ್ಯರೇ ಸಲಾರ್ ಚಿತ್ರಕ್ಕೂ ಕೆಲಸ ಮಾಡಿರುವುದು ವಿಶೇಷ. ಸಲಾರ್ ಚಿತ್ರ ಮೊದಲ ಭಾಗ “ಪಾರ್ಟ್ ಒನ್ ಸೀಸ್‌ಫೈರ್” ಎಂದು ತೋರಿಸಲಾಗಿದೆ. ಈ ಮೂಲಕ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗುವುದನ್ನು ಖಚಿತಪಡಿಸಲಾಗಿದೆ. ಸೋಲಿನ ಸರಮಾಲೆಯಲ್ಲಿರುವ ನಟ ಪ್ರಭಾಸ್ ಗೆ ಈ ಚಿತ್ರ ಬ್ರೇಕ್ ನೀಡುವ ಭರವಸೆ ಅಭಿಮಾನಿಗಳಲ್ಲಿದೆ. ಹಾಗೆ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಲಿದೆಯಾ ಕಾದುನೋಡಬೇಕಿದೆ.

More News