ನಾಪತ್ತೆಯಾಗಿದ್ದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಮೃತಪಟ್ಟ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ 15 ವರ್ಷದ ಹಿಂದೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತಕ್ಕೆ ಬರುವ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ
ಆಶ್ರಮವನ್ನು ನಿರ್ಮಿಸಿ, ಅಲ್ಲೇ ವಾಸ್ತವ್ಯ ಹೂಡ್ತಾರೆ. ಆದರೆ ಜುಲೈ 6 ರಂದು ಇದ್ದಕ್ಕಿದ್ದಂತೆ ಕಾಮಕುಮಾರ ನಂದಿ ಮಹಾರಾಜ ನಾಪತ್ತೆಯಾಗಿದ್ದರು. ಈ ಸಂಬಂಧ ಇಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಿ ಚಿಕ್ಕೋಡಿ ಠಾಣೆಯಲ್ಲಿ ಭಕ್ತರು ದೂರು ದಾಖಲಿಸಿದ್ದರು. ಪರಿಶೀಲನೆಗಿಳಿದ ಪೊಲೀಸರಿಗೆ ಜೈನ ಮುನಿ ಮೃತ ಪಟ್ಟ ಬಗ್ಗೆ ಮಾಹಿತಿ ಖಚಿತವಾಗಿದೆ.

ಜೈನ ಮುನಿ ಕಾಮಕುಮಾರರಿಗೆ ತಮ್ಮದೇ ಗ್ರಾಮದ ಇಬ್ಬರು ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆದಿದೆ. ಸ್ನೇಹದ ವಿಶ್ವಾಸದಿಂದಲೇ ಇಬ್ಬರು ವ್ಯಕ್ತಿಗಳೊಂದಿಗೆ ಲಕ್ಷಾಂತರ ರೂಪಾಯಿ ಹಣದ ವಹಿವಾಟು ನಡೆದಿದೆ. ಕೆಲ ಸಮಯದ ಬಳಿಕ ತಾವು ಕೊಟ್ಟ ಹಣವನ್ನು ವಾಪಸ್ ಕೇಳಿದ್ದರಿಂದ ಆಕ್ರೋಶಗೊಂಡ ಇಬ್ಬರು ಕೊಲೆ ಮಾಡಿದ ಬಗ್ಗೆ ಚಿಕ್ಕೋಡಿ ಪೊಲೀಸರು ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಣ ಕೇಳಿದ್ದೇ ತಡ ಜೈನ ಮುನಿ ಕಾಮಕುಮಾರರನ್ನು ಕೊಲೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದಾರೆ. ರಾತ್ರೋ ರಾತ್ರಿ ಆಶ್ರಮಕ್ಕೆ ನುಗ್ಗಿದ ಇಬ್ಬರು ಕಿರಾತಕರು ಮುನಿಯನ್ನು ಆಶ್ರಮದಲ್ಲೇ ಕೊಂದು ಶವವನ್ನು ಗ್ರಾಮದ ಬಾವಿಗೆ ಬಿಸಾಡಲಾಗಿದೆ ಎಂದು ತಿಳಿಸಿದ್ದು, ಬಾವಿಯಲ್ಲಿ ಶವ ಪತ್ತೆ ಕಾರ್ಯ ನಡೆಸಲಾಗ್ತಿದೆ.
ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿದ ಬೆಳಗಾವಿ ಎಸ್ಪಿ, ಡಾ. ಸಂಜೀವ್ ಪಾಟೀಲ್, ಆಶ್ರಮದಲ್ಲೇ ಕೊಲೆ ಮಾಡಿ ಬೇರೆ ಕಡೆ ಶವವನ್ನು ಬಿಸಾಡಿದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಜೈನ ಮುನಿ ನೀಡಿದ ಹಣವನ್ನು ವಾಪಸ್ ಕೇಳಿದ ಕಾರಣಕ್ಕಾಗಿ ಮುನಿ ಕಾಮಕುಮಾರ ನಂದಿ ಮಹಾರಾಜರನ್ನ ಕೊಲೆ ಮಾಡಿದ್ದಾಗಿ ಒಪ್ಪಿದ್ದಾರೆ. ಶವ ಪತ್ತೆ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.