ನಟಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದ ಸಿಟಾಡೆಲ್ ಆ್ಯಕ್ಷನ್ ಥ್ರಿಲ್ಲರ್ ವೆಬ್ ಸರಣಿ ಫ್ಲಾಪ್ ಆಗಿದ್ದು ಅಮೆಜಾನ್ ಸಿಇಒ ವಿವರವಾದ ವರದಿಯನ್ನು ಕೇಳಿದ್ದಾರೆ.
ಇತ್ತೀಚೆಗೆ ವೆಬ್ ಸರಣಿಗಳು ಟ್ರೆಂಡ್ ಆಗಿವೆ. ಲವ್, ಸಸ್ಪೆನ್ಸ್, ಥ್ರಿಲ್ಲರ್ ಅ್ಯಕ್ಷನ್ ಸೇರಿದಂತೆ ಉತ್ತಮ ಕಥೆಗಳುಳ್ಳ ವೆಬ್ ಸರಣಿಗಳು ಜನರನ್ನು ಸೆಳೆಯುತ್ತಿವೆ. ಹೀಗಾಗಿ ನೂರಾರು ಕೋಟಿ ಬಂಡವಾಳವನ್ನು ನಿರ್ಮಾಣ ಸಂಸ್ಥೆಗಳು, ನಿರ್ಮಾಪಕರು ಹೂಡುತ್ತಿದ್ದಾರೆ. ಇನ್ನು ಒಟಿಟಿಗಳು ಸಹ ಕಂಟೆಂಟ್ ಮೇಲೆ ಸಾವಿರಾರು ಕೋಟಿಗಳನ್ನು ಸುರಿಯುತ್ತಿವೆ. ಆದರೆ ಲಾಭ ಎಂಬುದು ಮರೀಚಿಕೆಯಾಗಿದೆ.

ಇತ್ತೀಚೆಗಷ್ಟೆ ನಟಿ ಪ್ರಿಯಾಂಕಾ ಚೋಪ್ರಾ ನಟಿಸಿರುವ ಸಿಟಾಡೆಲ್ ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿತ್ತು. ಈ ವೆಬ್ ಸರಣಿ ಫ್ಲಾಪ್ ಆಗಿದ್ದು ಅಮೆಜಾನ್ ಪ್ರೈಂ ಸಂಕಷ್ಟಕ್ಕೆ ಸಿಲುಕಿದೆ.
ಸಿಟಾಡೆಲ್ ಆಕ್ಷನ್ ಥ್ರಿಲ್ಲರ್ ವೆಬ್ಸರಣಿಗೆ ಸುಮಾರು 2000 ಕೋಟಿ ಹಣವನ್ನು ಅಮೆಜಾನ್ ಪ್ರೈಂ ಸುರಿದಿತ್ತು. ಅಮೆಜಾನ್ ಪ್ರೈಂ ನಿರ್ಮಾಣದ ಅತಿ ದೊಡ್ಡ ಬಜೆಟ್ನ ವೆಬ್ ಸರಣಿಗಳಲ್ಲಿ ಒಂದು ಎಂಬ ಖ್ಯಾತಿಗೆ ಸಿಟಾಡೆಲ್ ಪಾತ್ರವಾಗಿತ್ತು.

ಪ್ರಿಯಾಂಕಾ ಚೋಪ್ರಾ ಹಾಗೂ ಗೇಮ್ ಆಫ್ ಥ್ರೋನ್ಸ್ ಖ್ಯಾತಿಯ ರಿಚರ್ಡ್ ಮ್ಯಾಡನ್ ಸೇರಿದಂತೆ ಇನ್ನಿತರೆ ದೊಡ್ಡ ನಟರಿದ್ದ ವೆಬ್ ಸರಣಿಗೆ ಪ್ರಚಾರ ಸಹ ಜೋರಾಗಿಯೇ ಮಾಡಲಾಗಿತ್ತು. ಇದೆಲ್ಲವುದರ ನಡುವೆಯೂ ಸಿಟಾಡೆಲ್ ಪ್ರೇಕ್ಷಕರಿಂದ ತಿರಸ್ಕರಿಸಲ್ಪಟ್ಟಿದೆ.
ಹೀಗಾಗಿ ಅಮೆಜಾನ್ ಸಿಇಒ ಆಂಡಿ ಜಸ್ಸಿ, ಸಿಟಾಡೆಲ್ ಸೇರಿದಂತೆ ಇನ್ನೂ ಕೆಲವು ಶೋಗಳ ಬಜೆಟ್ ನಿರ್ವಹಣೆ ಇನ್ನಿತರೆ ಮಾಹಿತಿಗಳ ಪರಿಪೂರ್ಣ ವರದಿಯನ್ನು ಕೇಳಿರುವುದಾಗಿ ವರದಿಯಾಗಿದೆ.
ಈಗಾಗಲೆ ಅಮೆಜಾನ್ ಕಾಸ್ಟ್ ಕಟಿಂಗ್ ನೆಪ ಹೇಳಿ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಿದೆ. ಇದರ ಬೆನ್ನಲ್ಲೆ ಈಗ ಅದರ ಶೋಗಳು ಸಹ ಒಂದರ ಮೇಲೊಂದು ಸೋಲುತ್ತಿರುವುದು ದೈತ್ಯ ಒಟಿಟಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ ಸಿಟಾಡೆಲ್ ಮಾತ್ರವೇ ಅಲ್ಲದೆ ಇನ್ನೂ ಕೆಲವು ಶೋಗಳ ಬಜೆಟ್ ವರದಿಯನ್ನು ಸಿಇಒ ಕೇಳಿದ್ದಾರೆ ಎನ್ನಲಾಗಿದೆ.

ಸಿಟಾಡೆಲ್ ಸೇರಿದಂತೆ ಅಮೆಜಾನ್ ಸಂಸ್ಥೆ ನಿರ್ಮಿಸಿರುವ ಡೈಸಿ ಜೋನಸ್ ಆಂಡ್ ದಿ ಸಿಕ್ಸ್, ದಿ ಪವರ್, ಡೆಡ್ ರಿಂಗರ್ಸ್ ಇನ್ನೂ ಕೆಲವು ವೆಬ್ ಸರಣಿ ಹಾಗೂ ಸಿನಿಮಾಗಳು ಜನರನ್ನು ನಿರೀಕ್ಷಿತ ಮಟ್ಟದಲ್ಲಿ ತಲುಪಿಲ್ಲ. ವಿಶ್ವದ ಅತಿ ದೊಡ್ಡ ಬಜೆಟ್ನ ವೆಬ್ ಸರಣಿ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಲಾರ್ಡ್ ಆಫ್ ದಿ ರಿಂಗ್ಸ್; ದಿ ರಿಂಗ್ಸ್ ಆಫ್ ಪವರ್ ವೆಬ್ ಸರಣಿಯೂ ಸಹ ನಿರೀಕ್ಷಿಸಿದಷ್ಟು ಯಶಸ್ಸು ಕಂಡಿಲ್ಲ. ಈ ವೆಬ್ ಸರಣಿಯ ಒಂದು ಸೀಸನ್ ಮೇಲೆಯೇ ಅಮೆಜಾನ್ ಸುಮಾರು 3300 ಕೋಟಿಗೂ ಹೆಚ್ಚು ಹಣ ಹೂಡಿತ್ತು. ಇದರಿಂದಲೂ ಅಮೆಜಾನ್ ನಷ್ಟಕ್ಕೂ ಗುರಿಯಾಗಿದೆ.
ಹಾಲಿವುಡ್ನಲ್ಲಿ ಪ್ರಿಯಾಂಕಾ ಚೋಪ್ರಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಸಿಟಾಡೆಲ್ ವೆಬ್ ಸರಣಿ ಹಿಂದಿಯಲ್ಲಿಯೂ ನಿರ್ಮಾಣವಾಗುತ್ತಿದೆ. ಅಲ್ಲಿ ಪ್ರಿಯಾಂಕಾ ನಟಿಸಿದ್ದ ಪಾತ್ರದಲ್ಲಿ ಇಲ್ಲಿ ಸಮಂತಾ ನಟಿಸುತ್ತಿದ್ದಾರೆ. ನಾಯಕನಾಗಿ ಬಾಲಿವುಡ್ ಸ್ಟಾರ್ ವರುಣ್ ಧವನ್ ಇದ್ದಾರೆ. ಸಮಂತಾ ಹಾಗೂ ವರುಣ್ ಧವನ್ರ ವೆಬ್ ಸರಣಿಯ ಚಿತ್ರೀಕರಣ ಬಹುತೇಕ ಮುಗಿದಿದೆ ಎನ್ನಲಾಗುತ್ತಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪ್ರಗತಿಯಲ್ಲಿದೆ.
ಪ್ರಿಯಾಂಕಾರ ಸಿಟಾಡೆಲ್ ಸೋಲು ಸಮಂತಾರ ಸಿಟಾಡೆಲ್ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.