ಚಿಕ್ಕೋಡಿ: ನಂಬಿಕಸ್ಥರಿಗೆ ಹಣ ಕೊಟ್ಟು ವಾಪಸ್ ಪಡೆಯಲು ಹೋಗಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಚಿದ್ರ ಚಿದ್ರವಾಗಿ ಕೊಲೆಯಾಗಿಬಿಟ್ಟ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯಲ್ಲಿ ನಡೆದುಬಿಟ್ಟಿದೆ.

ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಪ್ರಕರಣ ಜಾಲಾಡಿದ ಪೊಲೀಸರಿಗೆ ನಿಜಕ್ಕೂ ಶಾಕ್ ಎದುರಾಗಿದೆ. ವಶಕ್ಕೆ ಪಡೆದ ದುರುಳರ ಮಾಹಿತಿ ಅನ್ವಯ ಜೈನ ಮುನಿಯವರ ಮೃತ ದೇಹ ಪರಿಶೀಲನೆ ಗೆ ಇಳಿದ ಅಧಿಕಾರಿಗಳಿಗೇ ದಂಗಾಗಿ ಹೋಗಿದ್ದಾರೆ.

ಜುಲೈ 6 ರಂದು ಇದ್ದಕ್ಕಿದ್ದಂತೆ ಕಾಮಕುಮಾರ ನಂದಿ ಮಹಾರಾಜ ನಾಪತ್ತೆಯಾಗಿದ್ದರು. ಈ ಸಂಬಂಧ ಇಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಿ ಚಿಕ್ಕೋಡಿ ಠಾಣೆಯಲ್ಲಿ ಭಕ್ತರು ದೂರು ದಾಖಲಿಸಿದ್ದರು. ಪರಿಶೀಲನೆಗಿಳಿದ ಪೊಲೀಸರಿಗೆ ಜೈನ ಮುನಿ ಮೃತ ಪಟ್ಟ ಬಗ್ಗೆ ಮಾಹಿತಿ ಖಚಿತವಾಗಿದೆ.
ಸ್ನೇಹದ ವಿಶ್ವಾಸದಿಂದ ಇಬ್ಬರು ವ್ಯಕ್ತಿಗಳೊಂದಿಗೆ ಲಕ್ಷಾಂತರ ರೂಪಾಯಿ ಹಣದ ವಹಿವಾಟು ನಡೆದಿದೆ. ಕೆಲ ಸಮಯದ ಬಳಿಕ ತಾವು ಕೊಟ್ಟ ಹಣವನ್ನು ವಾಪಸ್ ಕೇಳಿದ್ದರಿಂದ ಆಕ್ರೋಶಗೊಂಡ ಇಬ್ಬರು ಕೊಲೆ ಮಾಡಿದ ಬಗ್ಗೆ ಚಿಕ್ಕೋಡಿ ಪೊಲೀಸರು ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಜೈನ ಮುನಿಯ ಚಿದ್ರ ಚಿದ್ರ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ.

ತನಿಖೆ ವೇಳೆ ಖಟಕಬಾವಿ ಗ್ರಾಮದ ಗದ್ದೆಯಲ್ಲಿರುವ 400 ಅಡಿ ಆಳದ ಕೊಳವೆಬಾವಿಗೆ ಮೃತ ದೇಹ ಎಸೆದ ಬಗ್ಗೆ ಹಂತಕರು ಬಾಯ್ಬಿಟ್ಟಿದ್ದಾರೆ. ಹಂತಕರ ಹೇಳಿಕೆ ಅನ್ವಯ ಪರಿಶೀಲನೆಗೆ ನಡೆಸಿದ ಅಧಿಕಾರಿಗಳಿಗೆ 9 ಭಾಗಗಳಾಗಿ ಜೈನ ಮುನಿ ಮೃತ ದೇಹ ಪತ್ತೆಯಾಗಿದೆ. ಕೊಳವೆಬಾವಿಯ 25ನೇ ಅಡಿ ಆಳಕ್ಕೆ ರಕ್ತಸಿಕ್ತ ಸೀರೆ, ಟವೆಲ್ ಪತ್ತೆಯಾಗಿದೆ. 30ಅಡಿ ಆಳದಲ್ಲಿ ದೇಹದ 9 ಭಾಗಗಳು ಪತ್ತೆಯಾಗಿದೆ. ಎರಡು ಕೈ, ಎರಡು ಕಾಲು, ಎರಡು ಭಾಗ ತೊಡೆ, ತಲೆಯ ಎರಡು ಭಾಗ, ಹೊಟ್ಟೆ ಪ್ರತ್ಯೇಕ ಭಾಗ ಪತ್ತೆಯಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.