ಕೇರಳದಲ್ಲಿ ವರ್ಷಧಾರೆ,ಜಲಾಶಯಗಳ ಸುತ್ತ ರೆಡ್ ಅಲರ್ಟ್ : 20ಕ್ಕೂ ಹೆಚ್ಚು ಜನರ ಸಾವು, ಹಲವರು ನಾಪತ್ತೆ

ತಿರುವನಂತಪುರಂ: ಆಗ್ನೇಯ ಅರಭ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಕೇರಳ ರಾಜ್ಯದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕಳೆದೆರೆಡು ದಿನಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಇಂದಿನಿಂದ ಸ್ವಲ್ಪ ಪ್ರಮಾಣದಲ್ಲಿ ಮಳೆ ವಿರಾಮ ಘೋಷಿಸಿದ್ದು, ಅತೀವೃಷ್ಠಿಯಿಂದ ಹಲವಾರು ಜಿಲ್ಲೆಯ ಜನರ ಬದುಕು ಮೂರಾಬಟ್ಟೆಯಾಗಿದೆ.
ಎಲ್ಲೆಡೆ ಭಾರೀ ಮಳೆಯಾಗುತ್ತಿದ್ದು ಕೇರಳದ ಐದು ಜಿಲ್ಲೆಗಳಲ್ಲಿ ರೆಡ್ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೆಯೇ ಜಲಾಶಯದ ಸುತ್ತಮುತ್ತ ಇರುವ ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಮಳೆ ಸಂಬಂಧಿತ ಅವಘಡದಲ್ಲಿ ಸುಮಾರು 20ಕ್ಕೂ ಜನರು ಮೃತಪಟ್ಟಿದ್ದು, ನೂರಾರು ಜನರು ಕಾಣೆಯಾಗಿದ್ದಾರೆ, ಹಾಗೆಯೇ ವಸತಿಯನ್ನು ಕಳೆದುಕೊಂಡಿದ್ದಾರೆ.


ರಾಜ್ಯದ ದಕ್ಷಿಣ ಮತ್ತು ಮಧ್ಯ ಭಾಗದ ಹಲವಾರು ಪ್ರದೇಶಗಳು ಜಲಾವೃತಗೊಂಡಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪಟ್ಟಂತಿಟ್ಟ, ಎರ್ನಾಕುಲಂ, ಕೋಟ್ಟಾಯಂ, ತ್ರಿಶೂರ್ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಹಾಗೂ ಇದರ ಸುತ್ತಮುತ್ತ ಇರುವ ಜಿಲ್ಲೆಗಳಲ್ಲಿ ಅರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ತಿರುವನಂತಪುರಂ ಜಿಲ್ಲೆಯಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದ್ದರಿಂದ ಮಕ್ಕಳಿಬ್ಬರು ಸಿಲುಕಿಕೊಂಡಿದ್ದರು. ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಹಾಗೆಯೇ ಇಡುಕ್ಕಿಯಲ್ಲಿ ಪ್ರವಾಹಕ್ಕೆ ಕಾರೊಂದು ಕೊಚ್ಚಿಹೋಗಿತ್ತು. ಕೋಟ್ಟಾಯಂ ನಲ್ಲಿ ನಡೆದ ಭೂಕುಸಿತದಿಂದ ಆರು ಜನರು ಮೃತಪಟ್ಟಿದ್ದಾರೆ. ಹಲವಾರು ಜನರು ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ಹಾಗೆಯೇ ಪ್ರಯಾಣಿಕರಿದ್ದ ಬಸ್ ವೊಂದು ನೀರಿನಲ್ಲಿ ಸಿಲುಕಿಕೊಂಡಿತ್ತು. ಸ್ಥಳೀಯರು ಹರಸಾಹಸ ಮಾಡಿ ಬಸ್ ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದರಿಂದ ರಕ್ಷಣಾ ಪರಿಹಾರ ಕಾರ್ಯ ವಿಳಂಬವಾಗುತ್ತಿದ್ದು, ಅನೇಕ ಪ್ರಾಣ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ರಾಜ್ಯಸರ್ಕಾರ ತುರ್ತು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಗಂಜಿಕೇಂದ್ರಗಳನ್ನು ಸ್ಥಾಪಿಸಿದೆ.

ದೇವರ ನಾಡೆಂದು ಕರೆಯಲ್ಪಡುವ ಕೇರಳದಲ್ಲಿ ಭಾರೀ ಮಳೆ ಅವಾಂತರವನ್ನೇ ಸೃಷ್ಠಿಸಿದೆ. ಎರಡು ವರ್ಷಗಳ ಹಿಂದೆ ಮಳೆ ಪ್ರವಾಹವು ಉಂಟಾಗಿತ್ತು. ಅದಕ್ಕಿಂತ ಹೆಚ್ಚು ಅನಾಹುತ ಈ ಬಾರಿ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ ಅತೀ ಹೆಚ್ಚಿ ಹಾನಿಯಾಗಿದ್ದು, ವಾಯುಪಡೆಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ಮಾಡಲಾಗುತ್ತಿದೆ.

More News