ಬೆಂಗಳೂರು: ನಟ ಸುದೀಪ್ ಮತ್ತು ನಿರ್ಮಾಪಕರ ನಡುವಿನ ಜಟಾಪಟಿ ದಿನದಿಂದ ದಿನಕ್ಕೆ ತಾರಕಕ್ಕೆ ಹೋಗ್ತಿದೆ. ನಮಗೆ ಅನ್ಯಾಯ ಆಗಿ ಹೋಗಿದೆ ನ್ಯಾಯ ಕೊಡಿಸಿ ಎಂದು ಗೋಷ್ಠಿ ಕರೆದು ಮಾತನಾಡಿದ್ದೇ ತಡ ಸುದೀಪ್ ಅಭಿಮಾನಿಗಳು ಇದೀಗ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು.

ನಿರ್ಮಾಪಕರ ಹೇಳಿಕೆ ಖಂಡಿಸಿ ಚಾಮರಾಜನಗರದಲ್ಲಿ ಸುದೀಪ್ ಅಭಿಮಾನಿಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಎಂ.ಎನ್ ಕುಮಾರ್ ಹಾಗೂ ರಹಮಾನ್ ವಿರುದ್ಧ ಘೋಷಣೆ ಕೂಗಿದರು. ಅವರ ಬ್ಯಾನರ್ ತಂದು ರಸ್ತೆ ಮಧ್ಯದಲ್ಲೇ ಚಪ್ಪಲಿ ಸೇವೆ ಮಾಡಿ, ಧಿಕ್ಕಾರ ಕೂಗಿದರು. ಇದೇ ವೇಳೆ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್ ಗೆ ಮನವಿ ಪತ್ರ ಬರೆದು ಕೊಟ್ಟ ಅಭಿಮಾನಿಗಳು, ಸಾಕ್ಷಿ, ಆಧಾರ ಇಲ್ಲದೇ ಬಂದು ಆರೋಪ ಮಾಡುವವರನ್ನು ಫಿಲ್ಮ್ ಚೇಂಬರ್ ಒಳಗೆ ಸೇರಿಸಲೇಬಾರದು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ
ಎಂ. ಎನ್ ಕುಮಾರ್ ಮತ್ತು ರೆಹಮಾನ್ ಎರಡು ದಿನಗಳ ಒಳಗೆ ಕ್ಷಮೆ ಕೇಳದೇ ಇದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮ. ಹರೀಶ್, ಸುದೀಪ್ ರ ಅಭಿಮಾನಿಗಳು ಮನವಿ ಪತ್ರ ನೀಡಿದ್ದಾರೆ. ಆರೋಪ ಮಾಡುತ್ತಿರುವವರು ಕ್ಷಮೆ ಕೇಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿ ಮನವಿ ಮಾಡಿದ್ದಾರೆ. ತಮ್ಮ ವಿರುದ್ಧದ ಆರೋಪದ ಬಗ್ಗೆ ನಿನ್ನೆ ಅಷ್ಟೇ ಸುದೀಪ್ ಅವರು ಪತ್ರ ಬರೆದಿದ್ದಾರೆ. ಅವರು ಕಾನೂನಾತ್ಮಕವಾಗಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಯಾರ್ಯಾರ ಹೆಸರನ್ನು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೋ ಅವರ ಗಮನಕ್ಕೆ ತರುತ್ತೇವೆ. ಕ್ಷಮೆ ಕೇಳೋದು ಬಿಡೋದು ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.




