ಬೆಂಗಳೂರು : ಸ್ವಾತಂತ್ರ್ಯ ಹೋರಾಟಗಾರರು, ಮಹನೀಯರನ್ನು ನಮ್ಮ ಸರ್ಕಾರ ಗೌರವಿಸುತ್ತದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಸುಳ್ಳು ಹೇಳಿಸಿದ್ದೀರಿ. ಇದು ನೀಚತನದ ಪರಮಾವಧಿ ಎಂದು ಶಾಸಕ ಚನ್ನಬಸಪ್ಪ ಸರ್ಕಾರದ ವಿರುದ್ಧ ಹರಿಹಾಯ್ದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ವೀರ ಸಾವರ್ಕರ್ ಅವರ ಪಾಠವನ್ನು ಪಠ್ಯದಿಂದ ಕಿತ್ತು ಬಿಸಾಕಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಹೇಳುತ್ತಾರೆ.ಇದು ದಾಷ್ಟ್ರ್ಯತನವಲ್ಲವೇ? ಎಂದು ಏರಿದ ದನಿಯಲ್ಲಿ ಹೇಳಿದ್ದು ಕಾಂಗ್ರೆಸ್ ಸದಸ್ಯರನ್ನು ಕೆರಳಿಸಿತು.

ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ನರೇಂದ್ರಸ್ವಾಮಿ ಆಕ್ಷೇಪಿಸಿ,ಬ್ರಿಟಿಷರ ಕ್ಷಮೆ ಕೇಳಿದ ಸಾವರ್ಕರ್ ಹೇಗೆ ಸ್ವಾತಂತ್ರ್ಯ ಹೋರಾಟಗಾರರಾಗಲು ಸಾಧ್ಯ? ಸ್ವಾತಂತ್ರ್ಯ ಹೋರಾಟಗಾರ ಎಂದು ಸುಳ್ಳು ಹೇಳಿಕೊಂಡು ಪಿಂಚಣಿ ಪಡೆದವರು ಎಂದು ಟೀಕಿಸಲು ಮುಂದಾದರು.ಇದು ಬಿಜೆಪಿಯರನ್ನು ಮತ್ತಷ್ಟು ಕೆರಳಿಸಿತು.ಕೆಲಕಾಲ ವಾಗ್ವಾದ ನಡೆಯಿತು.
ಧರ್ಮದ ರಕ್ಷಣೆ, ಶೈಕ್ಷಣಿಕ ವ್ಯವಸ್ಥೆ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿರುವಂತೆ ನಿಮ್ಮ ಸರ್ಕಾರ ನಡೆದುಕೊಳ್ಳುತ್ತಿಲ್ಲ ಎಂಬುದನ್ನು ಎಳೆಎಳೆಯಾಗಿ ಹೇಳುತ್ತಿದ್ದು ಅದನ್ನು ಕೇಳುವ ತಾಳ್ಮೆ ತೋರಿಸಿ ಎಂದು ಆಡಳಿತ ಪಕ್ಷಕ್ಕೆ ಚನ್ಮಬಸಪ್ಪ ತಿರುಗೇಟು ನೀಡಿದರು.

ರಾಜ್ಯದಲ್ಲಿ ಸಂತರ ಹತ್ಯೆ ನಡೆದಿದೆ. ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದ್ದು, ರಾಜ್ಯಪಾಲರ ಭಾಷಣದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಸುಳ್ಳು ಹೇಳಿಸಲಾಗಿದೆ ಎಂದರು.




