ನಟ ಸುದೀಪ್, ನಿರ್ಮಾಪಕರಾದ ಎಂಎನ್ ಕುಮಾರ್, ರೆಹಮಾನ್ ನಡುವಿನ ಹಣದ ಜಟಾಪಟಿ ತಾರಕಕ್ಕೆ ಏರುತ್ತಿದೆ. ನಮಗೆ ಅನ್ಯಾಯ ಆಗಿದೆ. ನ್ಯಾಯ ಕೊಡಿಸಿ ಎಂದು ನಿರ್ಮಾಪಕರು ಗೋಷ್ಠಿ ಕರೆದರೆ, ಕಿಚ್ಚ ಕೋರ್ಟ್ ಮೆಟ್ಟಿಲ್ಲತ್ತಿದ್ದಾರೆ. ಸಮಸ್ಯೆ ಹೇಗೆ ಬಗೆಹರಿಸೋದು ಎಂದು ಪೇಚಿಗೆ ಸಿಲುಕಿದ ಫಿಲ್ಮ್ ಚೇಂಬರ್ ಸಿನಿಮಾ ರಂಗದ ಹಿರಿಯರ ಮನೆ ಕದ ತಟ್ಟಿದೆ.
ಕಳೆದೊಂದು ವಾರದಿಂದ ನಟ ನಿರ್ಮಾಪಕರ ಜಟಾಪಟಿ ಬೀದಿಗೆ ಬಿದ್ದಿದೆ. ಒಬ್ಬರ ನಂತರ ಒಬ್ಬರು ಗೋಷ್ಠಿ ನಡೆಸಿ ಸುದೀಪ್ ವಿರುದ್ಧ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ತಾಳ್ಮೆ ಕಳೆದುಕೊಂಡ ಸುದೀಪ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಿನಿಮಾ ಕ್ಷೇತ್ರದ ವಿಷಯವನ್ನ ಸಿನಿಮಾ ಮಂದಿ ಕೂತು ಚರ್ಚೆ ಮಾಡೋದು ಬಿಟ್ಟು ಸುದೀಪ್ ನ್ಯಾಯಾಲಯ ಮೊರೆ ಹೋದ ಬಗ್ಗೆ ಯೂ ನಿರ್ಮಾಪಕರು ಕಿಡಿಕಾರಿದರು. ಇತ್ತ ಫಿಲ್ಮ್ ಚೇಂಬರ್ ಗೆ ಪತ್ರ ಬರೆದ ಕಿಚ್ಚ, ಹಿಂದೆ ಮುಂದೆ ವಿಚಾರಿಸ್ದೆ ಗೋಷ್ಠಿ ಗೆ ಆಹ್ವಾನ ನೀಡಿದ್ದು, ಬೇಸರ ತರಿಸಿದೆ. ದಾಖಲೆ ಪರಿಶೀಲನೆ ಮಾಡಿ ಗೋಷ್ಠಿ ಗೆ ಅವಕಾಶ ಮಾಡಿಕೊಡಬೇಕಿತ್ತು. ಹೇಗೂ ನನ್ನ ಮೇಲೆ ಆರೋಪ ಬಂದಾಗಿದೆ. ನಾನು ಕಾನೂನಿನ ಮೂಲಕ ನ್ಯಾಯ ಪಡೆಯುವ ಪ್ರಯತ್ನ ಮಾಡುತ್ತೇನೆ. ದಯವಿಟ್ಟು ಬಿಟ್ಟು ಬಿಡಿ ಈ ಪ್ರಕರಣ ನಾನೇ ಬಗೆಹರಿಸಿಕೊಳ್ತೇನೆ ಎಂದು ಹೇಳಿಕೆ ಹಿನ್ನಲೆ ಪೇಚಿಗೆ ಸಿಲುಕಿದ ಫಿಲ್ಮ್ ಚೇಂಬರ್
ಹಿರಿಯ ನಟರಾದ ರವಿಚಂದ್ರನ್, ಶಿವಕುಮಾರ್ ಮಧ್ಯಸ್ಥಿಕೆ ಮೂಲಕ ಸಮಸ್ಯೆ ಬಗೆಹರಿಸುವ ಕಸರತ್ತು ಮಾಡ್ತಿದೆ.

ಈ ಹಿಂದೆ ಚಿತ್ರೋದ್ಯಮದಲ್ಲಿ ಇಂತಹ ಘಟನೆಗಳು ಜರುಗಿದಾಗ ಹಿರಿಯ ನಟ ಅಂಬರೀಶ್ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸೋ ಪ್ರಯತ್ನ ಮಾಡ್ತಿದ್ರು. ಅಂಬರೀಶ್ ಕಾಲಾನಂತರ ಇಂಡಸ್ಟ್ರಿಯನ್ನು ಮುನ್ನೆಡೆಸಿಕೊಂಡು ಹೋಗುವವರು ಯಾರು ಎನ್ನುವ ಪ್ರಶ್ನೆ ಶುರುವಾಗಿತ್ತು. ನಂತರ ಹಿರಿಯರಾದ ರವಿಚಂದ್ರನ್ ಮತ್ತು ಶಿವಣ್ಣ ಅವರಿಗೆ ಈ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಹೀಗಾಗಿ ನಟ ಸುದೀಪ್ ಪ್ರಕರಣವನ್ನ ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಮಧ್ಯಸ್ಥಿಕೆ ವಹಿಸಿ ತಿಳಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ನಟ ಸುದೀಪ್ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಶಿವರಾಜ್ ಕುಮಾರ್, ಒಂದು ವಾರ ಕಾಯಿರಿ. ಎಲ್ಲವೂ ಸರಿ ಹೋಗುತ್ತದೆ ಎಂದಿದ್ದು,
ಶಿವಣ್ಣ ಮಾತಿಗೆ ಸುದೀಪ್ ಏನು ಹೇಳುತ್ತಾರೆ ಅನ್ನೋದನ್ನ ಕಾದು ನೋಡ್ಬೇಕಿದೆ.




