Nation Awaits Launch Of ISROs Moon Mission: ಚಂದ್ರಯಾನ-3ಕ್ಕೆ ಕ್ಷಣಗಣನೆ.. ಇಂದು ನಭಕ್ಕೆ ಚಿಮ್ಮಲಿದೆ ಗಗನನೌಕೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ.

ದೇಶ ಸೇರಿದಂತೆ ವಿಶ್ವವೇ ಎದುರು ನೋಡುತ್ತಿರುವ ಈ ನೌಕೆಯು ಶುಕ್ರವಾರ ಉಡಾವಣೆಯಾಗಲಿದೆ.
ಜು.೧೪ರ ಶುಕ್ರವಾರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ವೆಹಿಕಲ್ ಮಾರ್ಕ್ ೧೧೧ ಮೂಲಕ ಚಂದ್ರಯಾನ ೩ರ ಗಗನನೌಕೆ ನಭಕ್ಕೆ ಚಿಮ್ಮಲಿದೆ.

ಈ ಮಹತ್ವದ ಉಡಾವಣೆಯಲ್ಲಿ ಅತ್ಯಂತ ಸೂಕ್ಷ್ಮ ತಂತ್ರಜ್ಞಾನ ಬಳಸಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಗಗನನೌಕೆಯನ್ನು ಇಳಿಸಲಾಗುವುದು ಎಂದು ಇಸ್ರೋ ತಿಳಿಸಿದೆ.
ಭಾರತದ ಮತ್ತೊಂದು ಸಾಧನೆ:
ಈ ಹಿಂದಿನ ಚಂದ್ರಯಾನ-2ರ ವೈಫಲ್ಯವನ್ನು ಗಮನದಲ್ಲಿಟ್ಟುಕೊಂಡ ಇಸ್ರೋ ವಿಜ್ಞಾನಿಗಳು ಯಶಸ್ಸಿನ ಮೆಟ್ಟಿಲೇರಲು ಚಂದ್ರಯಾನ-3 ರೂಪಿಸಿದ್ದಾರೆ.
ಜು.14 ರ ಮಧ್ಯಾಹ್ನ 2:35ಕ್ಕೆ ಚಂದ್ರಯಾನ-3 ಅನ್ನು ಎಲ್‌ವಿಎಂ 3 ಮೂಲಕ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಚಂದ್ರಯಾನ-3 ಯೋಜನೆ ಚಂದ್ರಯಾನ-2ರ ಮುಂದುವರಿದ ಭಾಗವಾಗಿದ್ದು, ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ಗಗನನೌಕೆ ಇಳಿಸಲಾಗುವುದು. ಪ್ರೊಪಲ್ಷನ್‌ ಮಾಡ್ಯೂಲ್‌, ಲ್ಯಾಂಡರ್‌ ಮತ್ತು ರೋವರ್‌ ಕಾನ್ಫಿಗರೇಶನ್‌ ಅನ್ನು ಚಂದ್ರನ ಕಕ್ಷೆಯಲ್ಲಿ 100 ಕಿಮೀವರೆಗೆ ಸಾಗಿಸುತ್ತದೆ ಎನ್ನಲಾಗಿದೆ.
ಚಂದ್ರನ ಅಂಗಳದಲ್ಲಿ ಚಂದ್ರಯಾನ ೩ ರ ನೌಕೆ…
ಚಂದ್ರಯಾನ-3 ಗಗನನೌಕೆಯನ್ನು ಇಳಿಸಲು ಚಂದ್ರನ ಮೇಲ್ಮೈನಲ್ಲಿ ಜಾಗವನ್ನು ಗುರುತಿಸಲಾಗಿದೆ. ಚಂದ್ರನ ದಕ್ಷಿಣ ಧ್ರುವದ ಬಳಿಯ 4 ಕಿಮೀ ಉದ್ದ ಹಾಗೂ 2 ಕಿಮೀ ಅಗಲದ ಪ್ರದೇಶದಲ್ಲಿ ಗಗನನೌಕೆಯನ್ನು ಇಳಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ತಿಳಿಸಿದ್ದಾರೆ. 


ಚಂದ್ರಯಾನ-1 ಮತ್ತು 2ರಲ್ಲಿ ಇದ್ದಂತೆ ಚಂದ್ರಯಾನ-3ರಲ್ಲಿ ಆರ್ಬಿಟರ್‌ ಇರುವುದಿಲ್ಲ. ಲ್ಯಾಂಡರ್‌ ಮತ್ತು ರೋವರ್‌ ಹೊತ್ತ ಗಗನನೌಕೆಯು ಆಗಸ್ಟ್‌ 23 ರ ಸುಮಾರಿಗೆ ಚಂದ್ರನ ಕಕ್ಷೆಗೆ ತಲುಪಲಿದೆ. ನಂತರ 15 ದಿನಗಳಲ್ಲಿ ನೌಕೆ ಚಂದ್ರನಲ್ಲಿ ಇಳಿಯಲಿದೆ. ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲ್ಮೈಯಲ್ಲಿ ಕಾರ್ಯನಿರ್ವಹಿಸಲು ಮತ್ತು ಡೇಟಾವನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ನೌಕೆ ಚಂದ್ರನಲ್ಲಿ ಇಳಿದಾಗ ಲ್ಯಾಂಡರ್‌ನಿಂದ ರೋವರ್ ಬೇರ್ಪಟ್ಟು ಪ್ರಯೋಗ ನಡೆಸಿ, ಡೇಟಾವನ್ನು ಸಂಗ್ರಹಿಸಲು ಚಂದ್ರನ ಮೇಲ್ಮೈಯಲ್ಲಿ ಸಂಚರಿಸುತ್ತದೆ. ಚಂದ್ರನನ್ನು ಆವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನ ಪದಾರ್ಥ ಅಧ್ಯಯನ ನಡೆಸುವ ಲೂನಾರ್‌ ರಿಗೊಲಿತ್‌, ಅಲ್ಲಿ ಭೂಕಂಪನ ಅಧ್ಯಯನ ಮಾಡುವ ಲೂನಾರ್‌ ಸೆಸಿಮಿಸಿಟಿ, ಹೊರ ಆವರಣದಲ್ಲಿನ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿನ ಧಾತುರೂಪದ ಸಂಯೋಜನೆ ಮುಂತಾದವುಗಳ ಅಧ್ಯಯನ ನಡೆಸಲಾಗುತ್ತದೆ ಎನ್ನಲಾಗಿದೆ.

More News