ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕೆ ಯಶಸ್ವಿಯಾಗಿ ಉಡಾವಣೆಯಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ವೆಹಿಕಲ್ ಮಾರ್ಕ್ ೧೧೧ ಮೂಲಕ ಚಂದ್ರಯಾನ ೩ರ ಗಗನನೌಕೆ ನಭಕ್ಕೆ ಯಶಸ್ವಿಯಾಗಿ ಚಿಮ್ಮಿದೆ.
ಚಂದ್ರಯಾನ 3 ನೌಕೆ ಮೂರು ಹಂತ ದಾಟಿ ನಿಗದಿತ ಕಕ್ಷೆ ಸೇರುವಲ್ಲಿಯೂ ಯಶಸ್ವಿಯಾಗಿದ್ದು, ಶ್ರೀಹರಿಕೋಟಾದ ಕೇಂದ್ರದಲ್ಲಿನ ವಿಜ್ಞಾನಿಗಳು, ತಂತ್ರಜ್ಞರು ಹರ್ಷ ಮುಗಿಲು ಮುಟ್ಟಿದೆ. ಯಶಸ್ವಿ ಕಾರಣರಾದ ಎಲ್ಲರಿಗೂ ಇಸ್ರೋ ಅಧ್ಯಕ್ಷ ಸೋಮನಾಥ್ ಧನ್ಯವಾದ ತಿಳಿಸಿದರು.

ಲ್ಯಾಂಡರ್ ಮತ್ತು ರೋವರ್ ಹೊತ್ತ ಗಗನನೌಕೆಯು ಆಗಸ್ಟ್ 23 ರ ಸುಮಾರಿಗೆ ಚಂದ್ರನ ಕಕ್ಷೆಗೆ ತಲುಪಲಿದೆ. ನಂತರ 15 ದಿನಗಳಲ್ಲಿ ನೌಕೆ ಚಂದ್ರನಲ್ಲಿ ಇಳಿಯಲಿದೆ. ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲ್ಮೈಯಲ್ಲಿ ಕಾರ್ಯನಿರ್ವಹಿಸಲು ಮತ್ತು ಡೇಟಾವನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ. ಇನ್ನು ಈ ನೌಕೆ ಚಂದ್ರನಲ್ಲಿ ಇಳಿದಾಗ ಲ್ಯಾಂಡರ್‌ನಿಂದ ರೋವರ್ ಬೇರ್ಪಟ್ಟು ಪ್ರಯೋಗ ನಡೆಸಿ, ಡೇಟಾವನ್ನು ಸಂಗ್ರಹಿಸಲು ಚಂದ್ರನ ಮೇಲ್ಮೈಯಲ್ಲಿ ಸಂಚರಿಸುತ್ತದೆ. ಚಂದ್ರನನ್ನು ಆವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನ ಪದಾರ್ಥ ಅಧ್ಯಯನ ನಡೆಸುವ ಲೂನಾರ್ ರಿಗೊಲಿತ್, ಅಲ್ಲಿ ಭೂಕಂಪನ ಅಧ್ಯಯನ ಮಾಡುವ ಲೂನಾರ್ ಸೆಸಿಮಿಸಿಟಿ, ಹೊರ ಆವರಣದಲ್ಲಿನ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿನ ಧಾತುರೂಪದ ಸಂಯೋಜನೆ ಮುಂತಾದವುಗಳ ಅಧ್ಯಯನ ನಡೆಸಲಾಗುತ್ತದೆ.
ರಷ್ಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದ ನಂತರ ಚಂದ್ರನ ಮೇಲೆ ನಿಯಂತ್ರಿತ ಲ್ಯಾಂಡಿಂಗ್ ಸಾಧಿಸಿದ ನಾಲ್ಕನೇ ದೇಶ ಭಾರತವಾಗಿದೆ.