ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸೇರಿದ ವ್ಯಕ್ತಿಗಳು ಕೈಗೊಳ್ಳಲಾದ ನಿರ್ಮಾಣ ಕಾಮಗಾರಿಗಳ ಮೊತ್ತವನ್ನು 50 ಲಕ್ಷ ರೂಪಾಯಿಗಳಿಂದ 1.00 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 2023ಕ್ಕೆ ತಿದ್ದುಪಡಿ ಮಾಡಿದ ವಿಧೇಯಕಕ್ಕೆ ಕರ್ನಾಟಕ ವಿಧಾನಸಭೆ ಇಂದು ಧ್ವನಿಮತದಿಂದ ಅಂಗೀಕಾರ ನೀಡಿದೆ.
ಮುಖ್ಯಮಂತ್ರಿಗಳ ಪರವಾಗಿ ಸದನದಲ್ಲಿ ವಿಧೇಯಕವನ್ನು ಅಂಗೀಕಾರಕ್ಕೆ ಮಂಡಿಸಿದ ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರ ಎಚ್.ಕೆ. ಪಾಟೀಲರವರು ತಿದ್ದುಪಡಿ ಮಸೂದೆಯ ಸಂಕ್ಷಿಪ್ತ ವಿವರಗಳನ್ನು ಮತ್ತು ಮಸೂದೆಯ ಮಂಡನೆಯ ನಂತರ ನಡೆದ ಚರ್ಚೆಗೆ ಸದನದಲ್ಲಿ ಉತ್ತರಿಸಿದರು.

ಸದನದಲ್ಲಿ ಚರ್ಚೆಗೆ ಉತ್ತರಿಸಿದ ಸಚಿವರು ಈ ಮೊದಲಿನ 50 ಲಕ್ಷ ರೂಪಾಯಿಯ ಅವಕಾಶ ಕಲ್ಪಿಸಿದ ತಿದ್ದುಪಡಿಯ ನಂತರ ಮೊದಲನೇ ಟೆಂಡರ್ ಕರೆಯಲು ಶೇಕಡ 62 ರಷ್ಟು ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಪಂಗಡದವರು ಟೆಂಡರ್ಗಳಲ್ಲಿ ಪಾಲ್ಗೊಂಡಿದ್ದು, 2ನೇ ಕರೆಯಲ್ಲಿ ಶೆ. 80ರಷ್ಟು ಅನುಸೂಚಿತ ಜಾತಿ ಮತ್ತು ಬುಡಕಟ್ಟು ಪಂಗಡದವರು ಪಾಲ್ಗೊಂಡಿದ್ದಾರೆ ಎಂದು ಸದನಕ್ಕೆ ವಿವರಿಸಿದರು. ಸಚಿವರ ವಿವರಣೆ ಮತ್ತು ಉತ್ತರದ ನಂತರ ವಿಧಾನಸಭೆ ಈ ವಿಧೇಯಕವನ್ನು ಧ್ವನಿ ಮತದಿಂದ ಅಂಗೀಕರಿಸಿತು.