IND v WI: ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಬಾರಿ 10 ವಿಕೆಟ್‌ಗಳು: ಕುಂಬ್ಳೆ ಸಾಧನೆ ಸರಿಗಟ್ಟಿದ ಅಶ್ವಿನ್

ಅತಿಥೇಯ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಭಾರತದ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್, ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೇ ಈ ಪ್ರದರ್ಶನದ ಮೂಲಕ ‘ಕೇರಂ ಬಾಲ್ ಸ್ಪೆಷಲಿಸ್ಟ್’ ಭಾರತದ ಮಾಜಿ ಕ್ರಿಕೆಟ್‌ಗ ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ ದಾಖಲೆಯನ್ನ ಸರಿಗಟ್ಟಿದ್ದಾರೆ.

ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಅಶ್ವಿನ್, ವಿಂಡೀಸ್ ತಂಡದ ಪ್ರಮುಖ 7 ವಿಕೆಟ್‌ಗಳನ್ನ ಪಡೆದು ಮಿಂಚಿದರು. ಆ ಮೂಲಕ ಪಂದ್ಯದಲ್ಲಿ ಒಟ್ಟು 12 ವಿಕೆಟ್‌ಗಳನ್ನ ಕಬಳಿಸಿದ ಅಶ್ವಿನ್, ಟೆಸ್ಟ್ ಕ್ರಿಕೆಟ್‌ನಲ್ಲಿ 8ನೇ ಬಾರಿ 10 ವಿಕೆಟ್‌ಗಳನ್ನು ಪಡೆದಕೊಂಡರು.‌ ಆ ಮೂಲಕ ದಿಗ್ಗಜ ಕ್ರಿಕೆಟ್‌ಗ ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ ದಾಖಲೆಯನ್ನ ಸಮನಾಗಿಸಿದರು. ಭಾರತದ ಶ್ರೇಷ್ಠ ಸ್ಪಿನ್ನರ್ ಎನಿಸಿರುವ ಅಶ್ವಿನ್ ಅವರ ಈ ಪ್ರದರ್ಶನದ ನೆರವಿನಿಂದ ಭಾರತ, ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್‌ ಹಾಗೂ 141 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಅಲ್ಲದೇ ಎರಡು ಪಂದ್ಯಗಳ ಸರಣಿಯಲ್ಲಿ ‌1-0 ಮುನ್ನಡೆ ಸಾಧಿಸಿತು.

ಅಲ್ಲದೇ ಇದೇ ಪಂದ್ಯದಲ್ಲಿ ಮತ್ತೊಂದು ಸಾಧನೆ ಮಾಡಿದ ಅಶ್ವಿನ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ವಿಶ್ವದ 16ನೇ ಬೌಲರ್‌ ಎಂಬ ಹೆಗ್ಗಳಿಕೆ ಪಡೆದರು. ಅಲ್ಲದೇ ಟೀಂ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದಿರುವ ಬೌಲರ್‌ಗಳ ಸಾಲಿನಲ್ಲಿ ಮಾಜಿ ಕ್ರಿಕೆಟ್‌ಗ ಹರ್ಭಜನ್ ಸಿಂಗ್(711 ವಿಕೆಟ್‌ಗಳು) ಸನಿಹಕ್ಕೆ ತಲುಪಿದ್ದಾರೆ. ಸದ್ಯ 709 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನ ಪಡೆದಿರುವ ಅಶ್ವಿನ್, ಸರಣಿಯ ಎರಡನೇ ಟೆಸ್ಟ್‌ನಲ್ಲಿ ಈ ದಾಖಲೆ ಮುರಿಯುವ ಎಲ್ಲಾ ಅವಕಾಶ ಹೊಂದಿದ್ದಾರೆ.

ಅಲ್ಲದೇ ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿ ತಲಾ 5 ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್, ವೆಸ್ಟ್ ಇಂಡೀಸ್ ವಿರುದ್ಧ ಎರಡು ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನ ಪಡೆದ ಭಾರತದ ಮೊದಲ ಬೌಲರ್ ಎನಿಸಿದರು. ವಿಂಡೀಸ್ ಪರ ಈವರೆಗೂ ಆರು ಬಾರಿ ಐದು ವಿಕೆಟ್‌ಗಳನ್ನ ಪಡೆದಿರುವ ಅಶ್ವಿನ್, ಭಾರತದ ಹೆಚ್ಚು ಬಾರಿ ಈ ಸಾಧನೆ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ.

More News