ಬೆಂಗಳೂರು: ಮಾಸ್ಟರ್ ಆನಂದ್ ಪುತ್ರಿ ವಂನ್ಷಿಕಾ ಹೆಸರು ಬಳಸಿಕೊಂಡು ವಂಚನೆ ಎಸಗಿದ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಬೆಂಗಳೂರು ಅಷ್ಟೇ ಅಲ್ಲದೇ, ರಾಜ್ಯದ ಹಲವು ಕಡೆ ನಿಶಾ ನರಸಪ್ಪ ವಂಚನೆ ಎಸಗಿರುವ ವಿಚಾರ ಬೆಳಕಿಗೆ ಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದ ವಂಚಕಿ ನಿಶಾ ನರಸಪ್ಪ, ರಾಜ್ಯದ ಬೇರೆ ಬೇರೆ ಪೋಷಕರಿಗೂ ಟೋಪಿ ಹಾಕಿದ್ದಾರೆ ಎಂಬ ಮಾಹಿತಿ ವಿಚಾರಣೆ ವೇಳೆ ಗೊತ್ತಾಗಿದೆ. ಆಡಿಷನ್ ನಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ಹಣ ಪಡೆದು ಆಡಿಷನ್ನೂ ಇಲ್ಲ. ಪಡೆದ ಹಣವನ್ನೂ ವಾಪಸ್ ನೀಡಿಲ್ಲ. ನಮಗೂ ಮೋಸ ಆಗಿದೆ ಎಂದು ರಾಜ್ಯದ ಬೇರೆ ಭಾಗಗಳಿಂದಲೂ ಪೋಷಕರು ದೂರು ದಾಖಲಿಸ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಈ ಹಿಂದೆ ಈವೆಂಟ್ ಮ್ಯಾನೆಜ್‌ಮೆಂಟ್ ಹೆಸರಲ್ಲಿ ಲಕ್ಷ ಲಕ್ಷ ದೋಚಿದ್ದ ಮಹಿಳೆ ನಂತರ ಪೋಷಕರನ್ನು ಟಾರ್ಗೆಟ್ ಮಾಡಲು ಪ್ರಾರಂಭಿಸಿದ್ದಾಳೆ. ರಾಜ್ಯಾದ್ಯಂತ ತನ್ನ ಜಾಲ ಹಬ್ಬಿದ್ದ ಆರೋಪಿ ನಿಶಾ ನರಸಪ್ಪ, ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಬೇಬಿ ಕಂಟೆಸ್ಟ್ ಹೆಸರೇಳಿ ಪೋಷಕರನ್ನೇ ಟಾರ್ಗೆಟ್ ಮಾಡಿ ಕೆಡವುತ್ತಿದ್ದ ಬಗ್ಗೆ ಸಾಕಷ್ಟು ಪೊಲೀಸ್ ಠಾಣೆಯಲ್ಲಿ ಈ ಮೊದಲೇ ಕೇಸ್ ದಾಖಲಾಗಿದೆ.
ಕೇವಲ ಮಕ್ಕಳಷ್ಟೇ ಅಲ್ಲ, ಸಾಕಷ್ಟು ಮಂದಿಗೆ ನಿಶಾ ನಾಮ ಹಾಕಿದ ಬಗ್ಗೆ ತನಿಖೆ ವೇಳೆ ಬಯಲಾಗ್ತಿದೆ. ಸಾಲದ ರೂಪದಲ್ಲಿ ಹಣ ನೀಡಿದರೆ ಲಾಭಾಂಶ ನೀಡುವುದಾಗಿ 35 ಲಕ್ಷ ರೂಪಾಯಿ ವಂಚಿಸಿದ ಬಗ್ಗೆ ನಿಶಾ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಫೋಟೋ ಶೂಟ್, ಇವೆಂಟ್ ಮ್ಯಾನೇಜ್ಮೆಂಟ್ ಹೆಸರು ಬಳಸಿ ವಂಚನೆ ಮಾಡಿದ ಬಗ್ಗೆ
ಸಕಲೇಶಪುರ, ತುಮಕೂರು ಸೇರಿದಂತೆ ಹಲವೆಡೆ ನಿಶಾ ವಿರುದ್ಧ ಆರೋಪ ಕೇಳಿ ಬರುತ್ತಿದ್ದು, ಯಲಹಂಕ ನ್ಯೂ ಟೌನ್ ಪೊಲೀಸರು ಹೈ ಅಲರ್ಟ್ ಆಗಿ ತನಿಖೆ ಶುರುವಿಟ್ಟಿದ್ದಾರೆ.




