KC Venugopal: ಪ್ರಜಾಪ್ರಭುತ್ವ ರಕ್ಷಣೆ, ಸಾಂವಿಧಾನಿಕ ಹಕ್ಕುಗಳು ಹಾಗೂ ಸ್ವಾಯತ್ತ ಸಂಸ್ಥೆಗಳ ರಕ್ಷಣೆಯ ಸದುದ್ದೇಶದಿಂದ ವಿರೋಧ ಪಕ್ಷಗಳು ಒಂದಾಗಿವೆ: ಕೆ.ಸಿ.ವೇಣುಗೋಪಾಲ್

ಬೆಂಗಳೂರು: ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆ, ಸಾಂವಿಧಾನಿಕ ಹಕ್ಕುಗಳು ಹಾಗೂ ಸ್ವಾಯತ್ತ ಸಂಸ್ಥೆಗಳ ರಕ್ಷಣೆಯ ಸದುದ್ದೇಶದಿಂದ ವಿರೋಧ ಪಕ್ಷಗಳು ಒಂದಾಗಿವೆ. ಬಿಜೆಪಿ ಸರ್ಕಾರ ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸುತ್ತಿದೆ. ರಾಹುಲ್ ಗಾಂಧಿ ಅವರ ಅನರ್ಹತೆ, ಮಹಾರಾಷ್ಟ್ರದ ಬೆಳವಣಿಗೆ ಇದಕ್ಕೆ ಸಾಕ್ಷಿ. ಮಣಿಪುರ ಕಳೆದ 75 ದಿನಗಳಿಂದ ಹೊತ್ತಿ ಉರಿಯುತ್ತಿದೆ. ಆ ಬಗ್ಗೆ ಒಂದೇ ಒಂದು ಪರಿಹಾರ ಇಲ್ಲ. ಈ ಬಗ್ಗೆ ದೇಶದ ಪ್ರಧಾನಮಂತ್ರಿಗಳು ಒಂದೇ ಒಂದು ಮಾತನಾಡಿಲ್ಲ. ಇದು ಆಘಾತಕಾರಿ ಬೆಳವಣಿಗೆ. ಇನ್ನು ದೇಶದ ಜನ ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ನಾವು ಅಧಿಕಾರ ಪಡೆಯಲು ಸಭೆ ಸೇರುತ್ತಿಲ್ಲ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಡೆಯುತ್ತಿರುವ ಸಭೆ. ಈ ಸರ್ಕಾರ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ಸಮಯ ಬಂದಾಗ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಇಂದು 26 ವಿರೋಧ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಲು ಮುಂದಾಗಿವೆ. ಇದು ವಿರೋಧ ಪಕ್ಷಗಳ ಎರಡನೇ ಸಭೆಯಾಗಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗುವುದು. 20ರಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಅಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂಬ ತಂತ್ರಗಾರಿಕೆ ರೂಪಿಸಲಾಗುವುದು. ಈ ಸಭೆ ರಾಷ್ಟ್ರ ರಾಜಕಾರಣದಲ್ಲಿ ಗೇಮ್ ಚೆಂಜರ್ ಆಗಲಿದೆ. ಪಾಟ್ನಾ ಸಭೆ ನಂತರ ಎಲ್ಲಾ ವಿರೋಧ ಪಕ್ಷಗಳನ್ನು ಏಕಾಂಗಿಯಾಗಿ ಎದುರಿಸಬಲ್ಲೇವು ಎಂದು ಬೀಗುತ್ತಿದ್ದವರು ಈಗ ಬೇರೆ ಪಕ್ಷಗಳ ಜೊತೆ ಮೈತ್ರಿಗೆ ಮುಂದಾಗಿದ್ದಾರೆ. ಇದು ವಿರೋಧ ಪಕ್ಷಗಳ ಒಗ್ಗಟ್ಟಿನ ಮೊದಲ ಯಶಸ್ಸಾಗಿದೆ ಎಂದರು.

ಜೈರಾಮ್ ರಮೇಶ್:

ಪ್ರಧಾನಮಂತ್ರಿಗಳ ಹಾಗೂ ಬಿಜೆಪಿ ಗಾಬರಿಯಾದರು ಪಾಟ್ನಾ ಸಭೆ ನಂತರ ಅವರಿಗೆ ಎನ್ ಡಿ ಎ ಮೈತ್ರಿಕೂಟ ನೆನಪಾಗಿದೆ. ಈಗ ಅವರು ನಾಳೆ ಎನ್ ಡಿ ಎ ಸಭೆ ನಡೆಸುತ್ತಿದ್ದಾರೆ. ಈ ಮೈತ್ರಿಕೂಟಕ್ಕೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಯುಪಿಎ ಮೈತ್ರಿಕೂಟ ಜೂನ್ ನಲ್ಲಿ ಪಾಟ್ನಾದಲ್ಲಿ ಸಭೆ ನಡೆದಿದ್ದು, ಜುಲೈನಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿದೆ. 24 ವಿರೋಧ ಪಕ್ಷಗಳ ನಾಯಕರು ಈ ಸಭೆಯಲ್ಲಿ ಸರ್ಕಾರದ ವಿರುದ್ಧ ಸಂಸತ್ ಒಳಗೆ ಹಾಗೂ ಹೊರಗೆ ಹೇಗೆ ಹೋರಾಡಬೇಕು ಎಂದು ಸಭೆ ನಡೆಸಲಿದೆ. ಇದು ಒಂದು ಪಕ್ಷದ ಮೈತ್ರಿ ಅಲ್ಲ. ಪಾಟ್ನಾ ಸಭೆಯಲ್ಲಿ 24 ಪಕ್ಷಗಳು ಭಾಗವಹಿಸಿದ್ದು, ಬೆಂಗಳೂರಿನ ಸಭೆಗೆ 26 ಪಕ್ಷಗಳು ಭಾಗವಹಿಸಲಿವೆ. ಮುಂದೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ರಾಹುಲ್ ಗಾಂಧಿ ನಮ್ಮ ಪಕ್ಷದ ಮಾಸ್ ನಾಯಕ. ಕಳೆದ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯನ್ನು ಶ್ಲಾಘಿಸಿದ್ದಾರೆ. ಜಾತ್ಯಾತೀತ ಪರವಾದ, ಸರ್ಕಾರದ ವಿರುದ್ಧ ಹೋರಾಡುವ ಎಲ್ಲಾ ಇನ್ನು ತ್ರಿಶಂಕು ಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ. ಪಕ್ಷಗಳು ತಮ್ಮ ತೀರ್ಮಾನ ಮಾಡಬೇಕು. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಬಯಸುತ್ತಾರೋ ಇಲ್ಲವೋ ಅವರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು.

ಪ್ರಶ್ನೋತ್ತರ:

ದಕ್ಷಿಣದಿಂದ ಯಾವ ಸಂದೇಶ ನೀಡಲು ಹೊರಟಿದ್ದೀರಿ, “ಈ ಸಭೆಯಲ್ಲಿ ಯಾವ ವಿಚಾರ ಚರ್ಚೆ ಮಾಡಲಾಗುವುದು ಎಂದು ಈಗ ಹೇಳಲು ಸಾಧ್ಯವಿಲ್ಲ. ಇಲ್ಲಿ ಕೇವಲ ಕಾಂಗ್ರೆಸ್ ತೀರ್ಮಾನ ಮಾತ್ರವಲ್ಲ. ಎಲ್ಲ ಪಕ್ಷಗಳೂ ಸೇರಿ ತೀರ್ಮಾನ ಮಾಡಲಿದ್ದಾರೆ. ಸೋನಿಯಾ ಗಾಂಧಿ ಅವರ ಅನುಭವ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಶಕ್ತಿ ತುಂಬಲಿದೆ” ಎಂದು ತಿಳಿಸಿದರು.

ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ, “ಈ ಸರ್ಕಾರದ ವಿರುದ್ಧ ಹೋರಾಡುವ ಧೈರ್ಯ ಇರುವವರು ನಮ್ಮ ಜೊತೆ ಬರುತ್ತಾರೆ. ಅವರಿಗೆ ಆಹ್ವಾನ ಅಗತ್ಯವಿಲ್ಲ” ಎಂದು ತಿಳಿಸಿದರು.

ವಿರೋಧ ಪಕ್ಷಗಳ ಮೈತ್ರಿಯ ನಾಯಕ ಯಾರು ಎಂದು ಕೇಳಿದ ಪ್ರಶ್ನೆಗೆ, ‘ನಾಯಕತ್ವದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ದೇಶದ ಸಮಸ್ಯೆ ಬಗ್ಗೆ ಗಮನಹರಿಸಿ. ಪ್ರತಿನಿತ್ಯ ಪ್ರಜಾಪ್ರಭುತ್ವಸ ಮೇಲೆ ದಾಳಿ ಆಗುತ್ತದೆ. ಮಣಿಪುರ ಹೊತ್ತಿ ಉರಿಯುತ್ತಿದ್ದರು ಮಾತನಾಡುತ್ತಿಲ್ಲ. ಚೀನಾ ಅತಿಕ್ರಮಣ ಸಮರ್ಥನೆ ಮಾಡಿಕೊಳ್ಳುವುದು ಯಾವ ನಾಯಕತ್ವ?’ ಎಂದು ತಿಳಿಸಿದರು.

More News