ಕಾಂಗ್ರೆಸ್ ಮುಖಂಡ, ಕೇರಳದ ಮಾಜಿ ಮುಖ್ಯಮಂತ್ರಿ ಓಮನ್ ಚಾಂಡಿ(76) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ
ಓಮನ್ ಚಾಂಡಿ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲೇ ಇಹಲೋಕ ತ್ಯಜಿಸಿದ್ದಾರೆ.
ಕೇರಳದಲ್ಲಿ 2 ದಿನ ಶೋಕಾಚರಣೆ
ಇದೇ ವರ್ಷದ ಆರಂಭದಲ್ಲಿ ಚಾಂಡಿ ನ್ಯುಮೋನಿಯಾ ಸೋಂಕಿಗೆ ಒಳಗಾದ ಕಾರಣ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕ್ಯಾನ್ಸರ್ ಗೂ ತುತ್ತಾಗಿದ್ದ ಚಾಂಡಿ ಅವರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದ ಕಾರಣ ಇಂದು ಮುಂಜಾನೆ 4.25 ಕ್ಕೆ ವಿಧಿವಶರಾಗಿದ್ದಾರೆ. ಕೇರಳದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಕೇರಳ ರಾಜ್ಯದಲ್ಲಿ 2 ದಿನ ಶೋಕಾಚರಣೆ ಮಾಡಲಿದ್ದಾರೆ.

1943ರ ಕೇರಳದ ಕೊಟ್ಟಾಯಂ ಜಿಲ್ಲೆಯ ಪುತ್ತುಪಲ್ಲಿ ಎಂಬಲ್ಲಿ ಜನಿಸಿದ್ದ ಅವರು, ವಿದ್ಯಾರ್ಥಿಯಾಗಿದ್ದಾಗಲೇ ಕೇರಳ ಸ್ಟೂಡೆಂಟ್ಸ್ ಯೂನಿಯನ್ ಸದಸ್ಯರಾಗಿ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಕೇರಳದ 10ನೇ ಮುಖ್ಯಮಂತ್ರಿಯಾಗಿ 2004ರಿಂದ 2006ರವರೆಗೆ ಹಾಗೂ 2011ರಿಂದ 2016ರವರೆಗೆ ಅನೇಕ ಜನಪರ ಕೆಲಸದ ಮೂಲಕವೇ ಪ್ರಸಿದ್ಧಿ ಗಳಿಸಿದ್ದರು.
ಇನ್ನು ಉಮನ್ ಚಾಂಡಿ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ನೇತೃತ್ವದಲ್ಲಿ ನಾನಾ ರಾಜ್ಯಗಳಲ್ಲಿರುವ ವಿಪಕ್ಷಗಳ ಬೃಹತ್ ಸಭೆ ಆಯೋಜಿಸಿರುವ ದಿನವೇ ತನ್ನ ನಾಯಕರೊಬ್ಬರನ್ನು ಕಳೆದುಕೊಂಡಿದ್ದು, ಕಂಬನಿ ಮಿಡಿದಿದೆ.




