ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂಲಕ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಿದ್ದು, ಇದರೊಂದಿಗೆ ‘ಚೇಸ್ ಮಾಸ್ಟರ್’ ಕ್ರಿಕೆಟ್ ಬದುಕಿಗೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ.
ಭಾರತ ತಂಡದ ಬ್ಯಾಟಿಂಗ್ ಅಸ್ತ್ರವಾಗಿರುವ ವಿರಾಟ್ ಕೊಹ್ಲಿ, ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ತಂಡದ ಕಾಯಂ ಸದಸ್ಯರಾಗಿದ್ದಾರೆ. ಈಗಾಗಲೇ ಕ್ರಿಕೆಟ್ ಬದುಕಿನಲ್ಲಿ ಹಲವು ಮಹತ್ವದ ಮೈಲುಗಲ್ಲು ದಾಟಿರುವ ವಿರಾಟ್, 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಮೂಲಕ ಮತ್ತೊಂದು ಹೆಗ್ಗಳಿಕೆ ಪಡೆಯುವ ಜೊತೆಗೆ ಭಾರತ ತಂಡದ ಪರ ಈ ಸಾಧನೆ ಮಾಡಿದ 4ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆಯಲಿದ್ದಾರೆ.

ಭಾರತದ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿದ ಬ್ಯಾಟ್ಸ್‌ಮನ್‌ಗಳ ಪೈಕಿ ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಭಾರತ ತಂಡದ ಬ್ಯಾಟಿಂಗ್ ಆಧಾರ ಸ್ತಂಭವಾಗಿದ್ದ ಸಚಿನ್ ತಮ್ಮ ಕ್ರಿಕೆಟ್ ಬದುಕಿನಲ್ಲಿ ಒಟ್ಟು 664 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಟೀಂ ಇಂಡಿಯಾದ ಯಶಸ್ವಿ ನಾಯಕರ ಸಾಲಿನಲ್ಲಿ ಗುರುತಿಸಲ್ಪಡುವ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡಿದ್ದು, ಕ್ಯಾಪ್ಟನ್ ಕೂಲ್ ಒಟ್ಟು 538 ಪಂದ್ಯಗಳನ್ನಾಡಿದ್ದಾರೆ. ಇನ್ನೂ ಭಾರತ ತಂಡದ ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್, 509 ಪಂದ್ಯಗಳನ್ನಾಡುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ.

ಪ್ರಸ್ತುತ 499 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ, ವಿಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ 500ನೇ ಪಂದ್ಯವನ್ನಾಡಲಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಭಾರತದ ಹಾಲಿ ಕ್ಯಾಪ್ಟನ್ ರೋಹಿತ್ ಶರ್ಮಾ(442 ಪಂದ್ಯಗಳು), ಮಾಜಿ ನಾಯಕರುಗಳಾದ ಮೊಹಮ್ಮದ್ ಅಜ಼ರುದ್ದೀನ್(433 ಪಂದ್ಯಗಳು) ಹಾಗೂ ಸೌರವ್ ಗಂಗೂಲಿ(424 ಪಂದ್ಯಗಳು) ಭಾರತದ ಪರ ಹೆಚ್ಚು ಪಂದ್ಯಗಳನ್ನ ಆಡಿದ ಆಟಗಾರರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.
ಶತಕದ ನಿರೀಕ್ಷೆಯಲ್ಲಿ ಕೊಹ್ಲಿ
ತಮ್ಮ ಕ್ರಿಕೆಟ್ ಬದುಕಿನ ವಿಶೇಷ ಪಂದ್ಯದಲ್ಲಿ ಕಣಕ್ಕಿಳಿಯುತ್ತಿರುವ ವಿರಾಟ್ ಕೊಹ್ಲಿ, ಈ ಪಂದ್ಯವನ್ನ ಅವಿಸ್ಮರಣೀಯಗೊಳಿಸಿವ ತವಕದಲ್ಲಿದ್ದಾರೆ. ವಿಶೇಷವಾಗಿ ಮೊದಲ ಟೆಸ್ಟ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಕೊಹ್ಲಿ, 2ನೇ ಟೆಸ್ಟ್‌ನಲ್ಲಿ ಶತಕ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ. ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದೇ ಆದಲ್ಲಿ ವಿದೇಶಿ ನೆಲದಲ್ಲಿ ಬಹುದಿನಗಳಿಂದ ಟೆಸ್ಟ್ ಶತಕ ಬಾರಿಸುವಲ್ಲಿ ವಿಫಲವಾಗಿರುವ ಕೊಹ್ಲಿಯ ಶತಕದ ಕನಸು ನನಸಾಗಲಿದೆ.