ಬೆಂಗಳೂರು: ಸುದೀಪ್ ಮತ್ತು ಕುಮಾರ್ ನಡುವಿನ ಸಮಸ್ಯೆ ಬಗೆಹರಿಸಲು ನಾನು ಟ್ರೈ ಮಾಡ್ತೀನಿ. ಪರಿಹಾರ ಹುಡುಕೋ ಪ್ರಯತ್ನ ಮಾಡ್ತೀನಿ. ಎರಡೂ ಕಥೆಗಳನ್ನ ಕೇಳ್ತೀನಿ. ನಂತರ ನನ್ನ ನಿರ್ಧಾರಕ್ಕೆ ಇಬ್ಬರೂ ಬದ್ಧರಾದರೆ ಮುಂದೆ ಏನು ಮಾಡಬೇಕು ಅನ್ನೋದನ್ನ ನಾನು ಹೇಳ್ತೀನಿ ಎಂದು ನಟ ರವಿಚಂದ್ರನ್ ಹೇಳಿದರು.
ನಟ ಸುದೀಪ್ ಮತ್ತು ನಿರ್ಮಾಪಕ ಎಂಎನ್ ಕುಮಾರ್ ನಡುವಿನ ಹಣದ ಜಟಾಪಟಿ ರವಿಚಂದ್ರನ್ ಮನೆ ಅಂಗಳಕ್ಕೆ ತಲುಪಿದೆ. ಇಂದು ಬೆಳಗ್ಗೆ ನಟ ರವಿಚಂದ್ರನ್ ರನ್ನು ಭೇಟಿ ಮಾಡಿದ ಎಂಎನ್ ಕುಮಾರ್, ಸುದೀಪ್ ನೀಡಬೇಕು ಎನ್ನಲಾದ ಹಣದ ದಾಖಲೆ ವಿವರ ನೀಡಲು ಪ್ರಯತ್ನಿಸಿದ್ದಾರೆ. ಮಾಹಿತಿ ಪಡೆದ ಬಳಿಕ ಮಾತನಾಡಿದ ನಟ ರವಿಚಂದ್ರನ್, ಕುಮಾರ್ ಎಲ್ಲಾ ಸಂಗತಿಯನ್ನು ವಿವರವಾಗಿ ಹೇಳಿದ್ದಾರೆ. ಇದು ಬಹಳ ದೊಡ್ಡ ಕಥೆ. ಮತ್ತೊಂದು ದಿನ ಕೇಳಬೇಕು. ಸದ್ಯ ಪರಿಸ್ಥಿತಿ ತಣ್ಣಗಾಗಬೇಕು. ನಾನು ಸುದೀಪ್ ಬಳಿ ಈ ಬಗ್ಗೆ ಮಾತನಾಡಬೇಕು. ಎರಡು ಕಥೆಗಳನ್ನ ಕೇಳ್ತೀನಿ. ನಂತರ ನನ್ನ ನಿರ್ಧಾರಕ್ಕೆ ಇಬ್ಬರೂ ಬದ್ಧರಾಗಬೇಕು. ನಂತರ ಏನು ಮಾಡಬೇಕು ಅನ್ನೋದನ್ನು ನಾನು ಹೇಳ್ತೀನಿ
ಸುದೀಪ್ ಆದಷ್ಟು ಬೇಗ ಸಿಗ್ತಾರೆ. ಸ್ವಲ್ಪ ತಾಳ್ಮೆ ಇರಲಿ. ಈಗಾಗಲೇ ಸುದೀಪ್ ಹಾಗೂ ಕುಮಾರ್ ಇಬ್ಬರೂ ನೊಂದಿದ್ದಾರೆ. ಚಿತ್ರರಂಗದಲ್ಲಿ ನಾವು ಸರಿಯಾಗಬೇಕು. ಚಿತ್ರರಂಗದ ಒಕ್ಕೂಟದಲ್ಲಿ ಒಗ್ಗಟ್ಟಿರಬೇಕು. ಈ ಸಮಸ್ಯೆ ಬಗೆಹರಿಸಲು ನಾನು ಟ್ರೈ ಮಾಡ್ತೀನಿ. ಪರಿಹಾರ ನಾನು ಹುಡುಕೋ ಪ್ರಯತ್ನ ಮಾಡ್ತೀನಿ ಎಂದು ಆಶ್ವಾಸನೆ ನೀಡಿದ್ದಾರೆ.

ಒಬ್ಬರ ಮೇಲೆ ಇನ್ನೊಬ್ಬರು ಟೀಕೆ ಮಾಡೋದು ಬಿಡಬೇಕು. ಎಲ್ಲರೂ ಚೆನ್ನಾಗಿರಬೇಕು ಅನ್ನೋದು ನನ್ನ ಆಸೆ. ಸುದೀಪ್ ನನಗೆ ‘ಮಾಣಿಕ್ಯ’ ಚಿತ್ರದಿಂದ ತುಂಬಾ ಕ್ಲೋಸ್ ಆದರು. ಅದಕ್ಕು ಮುಂಚಿನಿಂದಲೂ ಕುಮಾರ್ ನನಗೆ ಗೊತ್ತು. ಆಫೀಸ್ ಬಾಯ್ ಆಗಿ ಸೇರಿದ ಕುಮಾರ್ ಇಂದು ನಮ್ಮನ್ನು ನಿಲ್ಲಿಸಿ ಸಿನಿಮಾ ತೆಗೆಯೋ ಮಟ್ಟಕ್ಕೆ ಬೆಳೆದಿದ್ದಾರೆ. ಅದು ಖುಷಿಯ ವಿಚಾರ. ಅವರು ಕೊಟ್ಟ ದಾಖಲೆಗಳನ್ನು ನಾನು ಮೊದಲು ನೋಡ್ತೀನಿ. ಆಮೇಲೆ ಸುದೀಪ್ ಹತ್ರ ಕೂಡ ಮಾತಾಡ್ತೀನಿ ಎಂದರು.
ರವಿಚಂದ್ರನ್ ಭೇಟಿ ನಂತರ ಮಾತನಾಡಿದ ನಿರ್ಮಾಪಕ ಎಂ. ಎನ್ ಕುಮಾರ್, ಸ್ಟಾರ್‌ಗಳನ್ನು ಬೆಳೆಸುವ ಕೆಲಸ ನಮ್ಮದು. ಸ್ಟಾರ್‌ಗಳಿಗೆ ಮಸಿ ಬಳಿಯುವ ಕೆಲಸ ಮಾಡಲ್ಲ. ನಮ್ಮ ಸ್ನೇಹಿತರ ಜೊತೆ ಚರ್ಚಿಸಿ ಶಿವಣ್ಣನನ್ನು ಭೇಟಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ. ಈಗ ನಾನು
ಬಹಿರಂಗವಾಗಿ ಯಾವುದೇ ದಾಖಲೆ ಕೊಡಲ್ಲ. ರವಿಚಂದ್ರನ್ ಸರ್ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ನನ್ನ ಮಾತನನ್ನು ಇಬ್ಬರು ಕೇಳಬೇಕು ಎಂದಿದ್ದಾರೆ. ಅದಕ್ಕೆ ನಾನು ಒಪ್ಪಿದ್ದೀನಿ. ಧರಣಿ ನಿಲ್ಲಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.




