Insulting To Deputy Speaker: ಉಪಸಭಾಪತಿಗಳಿಗೆ ಅವಮಾನ, ದೈಹಿಕ ದಾಳಿ ಕ್ಷಮಿಸಲು ಸಾಧ್ಯವಿಲ್ಲ: ಕೃಷ್ಣಭೈರೇಗೌಡ

ಬೆಂಗಳೂರು ಜುಲೈ 19 : ಉಪ ಸಭಾಪತಿಗಳ ಮೇಲೆ ದೈಹಿಕ ಹಲ್ಲೆ, ಅಗೌರವ, ಅವಮಾನಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ದುರ್ನಡತೆ ಕ್ಷಮೆಗೆ ಅನರ್ಹ ಎಂದು ಸಚಿವ ಕೃಷ್ಣಭೈರೇಗೌಡ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ವಿರುದ್ದ ಒಗ್ಗೂಡಲು ರಾಷ್ಟ್ರ ಮಟ್ಟದ ಎಲ್ಲ ವಿಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳ ನಾಯಕರ ಸಭೆಯನ್ನು ಮಂಗಳವಾರ ಬೆಂಗಳೂರಿನಲ್ಲಿ ಏರ್ಪಡಿಸಲಾಗಿತ್ತು. ರಾಷ್ಟ್ರೀಯ ನಾಯಕರನ್ನು ಬರಮಾಡಿಕೊಳ್ಳುವ ಜವಾಬ್ದಾರಿಯನ್ನು ಸರ್ಕಾರ ಕೆಲವು ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿತ್ತು.

ಆದರೆ, ಸರ್ಕಾರದ ನಡೆಯನ್ನು ವಿರೋಧಿಸಿದ ಬಿಜೆಪಿ ನಾಯಕರು ಸದನದಲ್ಲಿ ಇಂದು ಇಡೀ ದಿನ ಪ್ರತಿಭಟನೆ ನಡೆಸಿದರು. ಅಲ್ಲದೆ, ಮಸೂದೆ ಪ್ರತಿಗಳನ್ನು ಹರಿದು ಉಪ ಸಭಾಪತಿಗಳ ಮುಖಕ್ಕೆ ಎಸೆದರು. ಪರಿಣಾಮ ಸದನದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಕೊನೆಗೆ ಬಿಜೆಪಿಯ ಕೆಲ ಶಾಸಕರನ್ನು ಅಮಾನತುಗೊಳಿಸಲಾಯಿತು. ಮಾರ್ಷಲ್ಗಳು ಅಮಾನತುಗೊಂಡ ಶಾಸಕರನ್ನು ಸದನದಿಂದ ಹೊರಹಾಕಿದರು.

ಬಿಜೆಪಿ ನಾಯಕರ ವರ್ತನೆಯನ್ನು ಕಂಡಿಸಿ ಸದನದಲ್ಲಿ ವಾಗ್ದಾಳಿ ನಡೆಸಿದ ಕೃಷ್ಣಭೈರೇಗೌಡ, “ವಿರೋಧ ಪಕ್ಷದ ಸದಸ್ಯರು ಪ್ರತಿಭಟಿಸಲಿ ನಮ್ಮ ತಕರಾರಿಲ್ಲ. ಪ್ರತಿಭಟನೆ, ಹೋರಾಟ ನಡೆಸುವುದು ವಿಪಕ್ಷಗಳ ಸ್ವಾತಂತ್ರ್ಯ. ಆದರೆ, ಪ್ರತಿಭಟನೆಯ ಹೆಸರಲ್ಲಿ ಮಸೂದೆಯ ಪ್ರತಿಯನ್ನು ಹರಿದು ಉಪ ಸಭಾಪತಿಗಳ ಮುಖಕ್ಕೆ ಎಸೆಯುವುದು ದೈಹಿಕ ಹಲ್ಲೆ. ಹೀಗೆ ಪೀಠಕ್ಕೆ ಅವಮಾನ ಅಗೌರವ ತೋರುವುದು ಸರಿಯಲ್ಲ. ಭವ್ಯ ಇತಿಹಾಸ ಹೊಂದಿರುವ ಕರ್ನಾಟಕ ವಿಧಾನಸಭೆಗೆ ಬಿಜೆಪಿ ಶಾಸಕರು ಮಸಿ ಬಳಿದಿದ್ದಾರೆ” ಎಂದು ವಿಷಾದ ವ್ಯಕ್ತಪಡಿಸಿದರು.

ಅಲ್ಲದೆ, “ಉಪ ಸಭಾಪತಿಗಳು ಶತಮಾನಗಳಿಂದ ತುಳಿತಕ್ಕೊಳಪಟ್ಟ ಸಮಾಜದಿಂದ ಬಂದವರು. ಅಂತಹ ಸಮಾಜದ ನಾಯಕರನ್ನು ಬಿಜೆಪಿಗರು ಹೀಗೆ ನಡೆಸಿಕೊಳ್ಳುವುದು ಸರಿಯಲ್ಲ. ಸಮಾಜದ ಯಾವ ವ್ಯಕ್ತಿಯನ್ನೂ ಹೀಗೆ ನಡೆಸಿಕೊಳ್ಳಬಾರದು. ವ್ಯಯಕ್ತಿಕವಾಗಿ ಸದನದ ಪರವಾಗಿ ನಾನು ಸಭಾಪತಿಗಳಲ್ಲಿ ಕ್ಷಮೆ ಕೋರುತ್ತೇನೆ. ಬಿಜೆಪಿ ಸದಸ್ಯರೂ ಕ್ಷಮೆ ಕೇಳಲು ಒತ್ತಾಯಿಸುತ್ತೇನೆ” ಎಂದರು.

“ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಒದಗಿಸುವ ಸಲುವಾಗಿ ಜನ ನಮ್ಮನ್ನು ಇಲ್ಲಿಗೆ ಕಳುಹಿಸಿದ್ದಾರೆ. ಸದನದ ಸಮಯ ಎಂದರೆ, ಅದು ಜನರ ಸಮಯ. ಈ ಸಮಯವನ್ನು ಉತ್ತಮ ಚರ್ಚೆಗೆ ಬಳಸಿಕೊಳ್ಳಬೇಕು. ಹೀಗೆ ರಾಜಕೀಯ ಮಾಡುವುದು ಸರಿಯಲ್ಲ” ಎಂದು ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರಿಗೆ ಸಚಿವ ಕೃಷ್ಣಭೈರೇಗೌಡ ಕಿವಿಮಾತು ಹೇಳಿದರು.

More News