ಅತಿಥೇಯ ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಲಿದ್ದು, ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯುತ್ತಿರುವ ಪಂದ್ಯಕ್ಕಾಗಿ ಉಭಯ ತಂಡಗಳು ತಮ್ಮದೇ ರಣತಂತ್ರ ರೂಪಿಸಿಕೊಂಡಿವೆ. ಮೊದಲ ಪಂದ್ಯವನ್ನ ಗೆದ್ದಿರುವ ಭಾರತ 2-0 ಅಂತರದಲ್ಲಿ ಸರಣಿ ಗೆಲ್ಲುವ ಲೆಕ್ಕಾಚಾರದಲ್ಲಿದ್ದರೆ. ಬಲಿಷ್ಠ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯೊಂದಿಗೆ ವೆಸ್ಟ್ ಇಂಡೀಸ್ ಸಜ್ಜಾಗಿದೆ.
ಈ ಪಂದ್ಯದ ಮೂಲಕ ಉಭಯ ತಂಡಗಳು 1948-49ರಿಂದ ಈವರೆಗೂ 100ನೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿವೆ. ಹೀಗಾಗಿ ಈ ವಿಶೇಷ ಪಂದ್ಯವನ್ನ ಗೆದ್ದು ಅವಿಸ್ಮರಣೀಯವಾಗಿ ಉಳಿಸಿಕೊಳ್ಳಲು ಎರಡು ತಂಡಗಳು ಎದುರು ನೋಡುತ್ತಿವೆ. ಆದರೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಪ್ರಾಬಲ್ಯ ಸಾಧಿಸುವ ಮೂಲಕ ಇನ್ನಿಂಗ್ಸ್ ಹಾಗೂ 141 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಗೆಲ್ಲುವ ಆತ್ಮವಿಶ್ವಾಸ ಹೊಂದಿದೆ.

ಆದರೆ ತವರಿನಲ್ಲಿ ನಡೆಯುತ್ತಿರುವ ಸರಣಿಯನ್ನ ಸಮಬಲದೊಂದಿಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ವೆಸ್ಟ್ ಇಂಡೀಸ್ ಬಲಿಷ್ಠ ಕಮ್ ಬ್ಯಾಕ್ ಮಾಡುವ ಲೆಕ್ಕಾಚಾರ ಹೊಂದಿದೆ. ಆದರೆ ಇದಕ್ಕಾಗಿ ಸಾಕಷ್ಟು ಪರಿಶ್ರಮ ಹಾಗೂ ಎಚ್ಚರಿಕೆಯ ಆಟವಾಡಬೇಕಾದ ಒತ್ತಡ ಕೆರೆಬಿಯನ್ನರ ತಂಡಕ್ಕೆ ಎದುರಾಗಿದೆ. ಟೀಂ ಇಂಡಿಯಾವನ್ನ ಕಟ್ಟಿ ಹಾಕಬೇಕಾದಲ್ಲಿ ಕ್ರೇಗ್ ಬ್ರಾಥ್ವೈಟ್ ಸಾರಥ್ಯದ ವಿಂಡೀಸ್ ಪಡೆ ಪಂದ್ಯದ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಬೇಕಿದೆ. ಪ್ರಮುಖವಾಗಿ ನಾಯಕ ಬ್ರಾಥ್ವೈಟ್, ಅನುಭವಿ ಆಟಗಾರರಾದ ಜೇಸನ್ ಹೋಲ್ಡರ್, ಚಂದ್ರಪಾಲ್ ಯುವ ಆಟಗಾರ ಅಲಿಕ್ ಅತನಾಜ಼್ ಅವರ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಮೊದಲ ಪಂದ್ಯವನ್ನ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಭಾರತ ಬಹುತೇಕ ಮೊದಲ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ. ಆದರೆ ವೆಸ್ಟ್ ಇಂಡೀಸ್ ತಂಡದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ನಿರೀಕ್ಷೆ ಇದ್ದು, ಸ್ಪಿನ್ ಬೌಲಿಂಗ್ ವಿಭಾಗವನ್ನ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಶೆನಾನ್ ಗ್ಯಾಬ್ರೆಲ್ ಹಾಗೂ ಬೌಲಿಂಗ್ ಆಲ್ರೌಂಡರ್ ಕೆವಿನ್ ಸಿಂಕ್ಲೇರ್ ಅವರುಗಳನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಇನ್ನೂ ಉಭಯ ತಂಡಗಳ ನಡುವಿನ 2ನೇ ಟೆಸ್ಟ್ ಪಂದ್ಯ ಹಲವು ಮೈಲುಗಲ್ಲುಗಳಿಗೆ ಸಾಕ್ಷಿಯಾಗಲಿದೆ. ಪ್ರಮುಖವಾಗಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ಇದು 500ನೇ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಜೊತೆಗೆ ಭಾರತ ತಂಡದ ಸ್ಪಿನ್ ಅಸ್ತ್ರ ರವಿಚಂದ್ರನ್ ಅಶ್ವಿನ್, ಈ ಪಂದ್ಯದಲ್ಲಿ ಮತ್ತೊಮ್ಮೆ 5 ವಿಕೆಟ್‌ಗಳನ್ನ ಪಡೆದಿದ್ದೇ ಆದಲ್ಲಿ ಆ ಮೂಲಕ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್‌ಗಳನ್ನ ಪಡೆದಿರುವ ಅನಿಲ್ ಕುಂಬ್ಳೆ ದಾಖಲೆಯನ್ನ ಬ್ರೇಕ್ ಮಾಡಲಿದ್ದಾರೆ.




