ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಅತ್ಯಾಚಾರ ಮಾಡಿ, ಬೆತ್ತಲೆಯಾಗಿಸಿ ಮೆರವಣಿಗೆ ಮಾಡಿಸಿದ ಘಟನೆ ದೇಶದಾದ್ಯಂತ ಆಘಾತಕ ಉಂಟುಮಾಡಿದೆ. ಇದರಿಂದ ವಿಚಲಿತರಾದ ನಟ ಕಿಶೋರ್, ಕೇವಲ ಮತ ಮತ್ತು ಅಧಿಕಾರಕ್ಕಾಗಿ ಜನರನ್ನು ವಿಭಜಿಸುವ ನಿಮ್ಮ ರಾಜಕೀಯ, ಇಂದು ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಈಗಲಾದರೂ ನಿಮ್ಮ ಬಾಯಿ ತೆರೆದು ಈ ಮಹಿಳೆಯರಲ್ಲಿ ಕ್ಷಮೆಯಾಚಿಸದಿದ್ದರೆ ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ ಎಂದು ವ್ಯಂಗ್ಯ ವಾಗಿ ಟೀಕಿಸಿದ್ದಾರೆ.
ಕಳೆದ ಮೇ 4 ರಂದು ಮಣಿಪುರ ರಾಜಧಾನಿ ಇಂಫಾಲ್‌ನಿಂದ 35 ಕಿಲೋ ಮೀಟರ್ ದೂರದ ತೌಬಲ್ ಜಿಲ್ಲೆಯಲ್ಲಿ ಕುಕಿ-ಜೋಮಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಪುರುಷರ ಗುಂಪೊಂದು ಅತ್ಯಾಚಾರ ನಡೆಸಿ, ಕ್ಯಾಮೆರಾ ಮುಂದೆ ಬೆತ್ತಲೆಯಾಗಿ ಮೆರವಣಿಗೆ ನಡೆಸಿದ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಎರಡು ತಿಂಗಳ ಹಿಂದೆ ನಡೆದಿದ್ದ ಈ ಪೈಶಾಚಿಕ ಕೃತ್ಯಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಇನ್ನು ಘಟನೆಯ ವೀಡಿಯೋ ವನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೆ ಮಾಡಿರುವ ನಟ ಕಿಶೋರ್, ಹೌದು, ನಿಮ್ಮಿಂದ ನಾವು ಏನನ್ನಾದರೂ ನಿರೀಕ್ಷಿಸಲು ಹೇಗೆ ಸಾಧ್ಯ? ಮಹಿಳಾ ಕುಸ್ತಿಪಟುಗಳ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಸದ್ದಿಲ್ಲದೆ ಬೆಂಬಲಿಸಿದವರು ನೀವೇ ಅಲ್ಲವೇ? ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳನ್ನು ಸದ್ದಿಲ್ಲದೆ ಬಿಡುಗಡೆ ಮಾಡಿ ಸಂಭ್ರಮಿಸಿದವರು ನೀವೇ ಅಲ್ಲವೇ? ಹಾತ್ರಸ್ ನ ದಲಿತ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನು ಮುಚ್ಚಿ ಮುಗಿಸಿದವರು ನೀವೇ ಅಲ್ಲವೇ? ನಿಮ್ಮ ಘೋಷಣೆಗಳನ್ನು ನಿಲ್ಲಿಸಿ ಮೊದಲು ಕೆಲಸ ಮಾಡಿ. ನಿಮ್ಮ ಬೇಟಿ ಬಚಾವೋ ನಾಟಕಕ್ಕೆ ಧಿಕ್ಕಾರವಿರಲಿ ಎಂದು ಗರಂ ಆಗಿದ್ದಾರೆ.




