ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್‌ನಿಂದ ತಂಡಕ್ಕೆ ಆಸರೆಯಾದರೆ, ಉಪ ನಾಯಕ ಅಜಿಂಕ್ಯಾ ರಹಾನೆ ಮತ್ತೆ ನಿರಾಸೆ ಮೂಡಿಸಿದ್ದಾರೆ.
ಪೋರ್ಟ್ ಆಫ್ ಸ್ಪೇನ್‌ನಲ್ಲಿ ಆರಂಭಗೊಂಡ 2ನೇ ಟೆಸ್ಟ್‌ನಲ್ಲಿ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ 1ನೇ ದಿನದಾಟದ ಅಂತ್ಯಕ್ಕೆ 288/4 ರನ್‌ಗಳಿಸಿದೆ. ಭಾರತದ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್(57), ರೋಹಿತ್ ಶರ್ಮಾ(80), ವಿರಾಟ್ ಕೊಹ್ಲಿ (87) ಹಾಗೂ ರವೀಂದ್ರ ಜಡೇಜಾ(36) ರನ್‌ಗಳಿಸಿ ಮಿಂಚಿದರು. ಆದರೆ ಪ್ರಮುಖ ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯುತ ಆಟದ ನಡುವೆಯೂ ಅಜಿಂಕ್ಯಾ ರಹಾನೆ(8) ನಿರೀಕ್ಷಿತ ಆಟವಾಡುವಲ್ಲಿ ವಿಫಲವಾಗುವ ಮೂಲಕ ಮತ್ತೊಮ್ಮೆ ಭಾರೀ ನಿರಾಸೆ ಮೂಡಿಸಿದರು.

ಎಂದಿನಂತೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಉಪ ನಾಯಕನ ಬ್ಯಾಟಿಂಗ್ ಮೇಲೆ ಭಾರೀ ನಿರೀಕ್ಷೆ ಹೊಂದಲಾಗಿತ್ತು. ಆದರೆ ಈ ಎಲ್ಲಾ ನಿರೀಕ್ಷೆಗಳನ್ನ ಹುಸಿಯಾಗಿಸಿದ ರಹಾನೆ, ಆಡಿದ 36 ಬಾಲ್ ಗಳಲ್ಲಿ ಕೇವಲ 8 ರನ್‌ಗಳಿಸಿ ಶೆನಾನ್ ಗೆಬ್ರಿಯಲ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. ಇದರೊಂದಿಗೆ ಮೊದಲ ಟೆಸ್ಟ್‌ನಲ್ಲಿ ಆಡಿದ ಏಕೈಕ ಇನ್ನಿಂಗ್ಸ್‌ನಲ್ಲಿ 3 ರನ್‌ಗಳಿಸಿ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದ ರಹಾನೆ, ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ವಿಂಡೀಸ್ ಪ್ರವಾಸಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಜಿಂಕ್ಯಾ ರಹಾನೆ, ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ 89 ಹಾಗೂ 46 ರನ್‌ಗಳಿಸುವ ಮೂಲಕ ತಂಡದ ಜವಾಬ್ದಾರಿಯ ಆಟವಾಡಿದ್ದರು. ರಹಾನೆ ಅವರ ಈ ಗಮನಾರ್ಹ ಪ್ರದರ್ಶನದಿಂದಾಗಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಇವರಿಗೆ ತಂಡದ ಉಪ ನಾಯಕನ ಜವಾಬ್ದಾರಿ ನೀಡಲಾಗಿತ್ತು. ಆದರೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ದೊರೆತ ಅವಕಾಶವನ್ನ ಸರಿಯಾಗಿ ಬಳಕೆ ಮಾಡಿಕೊಳ್ಳದೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ರಹಾನೆ ತಮ್ಮ ಮೇಲಿನ ನಿರೀಕ್ಷೆ ಹುಸಿಯಾಗಿಸಿದ್ದಾರೆ.
ಟೀಂ ಇಂಡಿಯಾದ ಅನುಭವಿ ಆಟಗಾರನಾಗಿರುವ ಅಜಿಂಕ್ಯಾ ರಹಾನೆ, ಭಾರತದ ಪರ ಈವರೆಗೂ 85 ಟೆಸ್ಟ್ ಪಂದ್ಯಗಳನ್ನ ಆಡಿದ್ದು 38.46ರ ಬ್ಯಾಟಿಂಗ್ ಸರಾಸರಿಯಲ್ಲಿ 5077 ರನ್‌ಗಳಿಸಿದ್ದಾರೆ. ಇದರಲ್ಲಿ 12 ಶತಕ ಹಾಗೂ 26 ಅರ್ಧಶತಕ ದಾಖಲಿಸಿದ್ದಾರೆ.




