ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಅದ್ಭುತ ಆಟವಾಡಿದ ವಿರಾಟ್ ಕೊಹ್ಲಿ, ತಮ್ಮ 29ನೇ ಟೆಸ್ಟ್ ಶತಕ ದಾಖಲಿಸಿದರು. ತಮ್ಮ ಈ ಅಮೋಘ ಶತಕದೊಂದಿಗೆ ಕಿಂಗ್ ಕೊಹ್ಲಿ, ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದ್ದ ದಾಖಲೆಯನ್ನ ಸರಿಗಟ್ಟಿದ್ದಾರೆ.

ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಕೊಹ್ಲಿ, ಕಳೆದ ಐದು ವರ್ಷದಿಂದ ವಿದೇಶಿ ನೆಲದಲ್ಲಿ ಟೆಸ್ಟ್ ಶತಕದ ಬರ ಎದುರಿಸುತ್ತಿದ್ದರು. ಆದರೆ ವಿಂಡೀಸ್ ವಿರುದ್ಧ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವಾಡಿದ ವಿರಾಟ್, ಭರ್ಜರಿ ಬ್ಯಾಟಿಂಗ್ ಮೂಲಕ ಶತಕ ಬಾರಿಸಿ ಸಂಭ್ರಮಿಸಿದರು. ಇದು ವಿದೇಶಿ ನೆಲದಲ್ಲಿ ವಿರಾಟ್ ಕೊಹ್ಲಿ ದಾಖಲಿಸಿದ 15ನೇ ಟೆಸ್ಟ್ ಶತಕವಾಗಿದ್ದು, ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ದಾಖಲಿಸಿದ 29ನೇ ಶತಕವಾಗಿದೆ. ಇದರೊಂದಿಗೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದ್ದ 29 ಟೆಸ್ಟ್ ಶತಕದ ದಾಖಲೆಯನ್ನ ‘ಚೇಸ್ ಮಾಸ್ಟರ್’ ಸರಿಗಟ್ಟಿದ್ದಾರೆ.

4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದರು. ಕೊಹ್ಲಿ ದಾಖಲಿಸಿದ 121 ರನ್‌ಗಳ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 438 ರನ್‌ಗಳಿಸಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್, 5ನೇ ವಿಕೆಟ್‌ಗೆ ರವೀಂದ್ರ ಜಡೇಜಾ ಅವರೊಂದಿಗೆ 159 ರನ್‌ಗಳ ಅತ್ಯುತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು.

ವಿಶೇಷವೆಂದರೆ ವೆಸ್ಟ್ ಇಂಡೀಸ್ ವಿರುದ್ಧ ವಿರಾಟ್ ಕೊಹ್ಲಿ ತಮ್ಮ 29ನೇ ಟೆಸ್ಟ್ ಶತಕ ದಾಖಲಿಸಿದರೆ. ಭಾರತ ತಂಡದ ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಸಹ 2002ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲೇ ತಮ್ಮ 29ನೇ ಟೆಸ್ಟ್ ಶತನ ಬಾರಿಸಿದ್ದರು. ಇದಕ್ಕೂ ಮುನ್ನ ಭಾರತ ತಂಡದ ಮತ್ತೋರ್ವ ದಿಗ್ಗಜ ಬ್ಯಾಟ್ಸ್‌ಮನ್ ಸುನೀಲ್ ಗವಾಸ್ಕರ್ ಸಹ 1983ರಲ್ಲಿ ತಮ್ಮ 29ನೇ ಟೆಸ್ಟ್ ಶತಕವನ್ನ ವೆಸ್ಟ್ ಇಂಡೀಸ್ ವಿರುದ್ಧವೇ ಬಾರಿಸಿದ್ದರು.